ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಮಹಿಳೆಯರಿಗೆ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ಐಸಿಎಆರ್ ಪ್ರಧಾನ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ. ತ್ರಿಲೋಚನ್ ಮಹಾಪಾತ್ರ ತಿಳಿಸಿದರು.
ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಆರಂಭವಾದ 9ನೇ ಮಹಿಳಾ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಎಲ್ಲೆಡೆ ಮಹಿಳೆಯರನ್ನು ಪೂಜಿಸುವ ಕಾರ್ಯ ಆಗುತ್ತಿದೆ. ಆದರೆ ಕೆಲವೆಡೆ ನಿರೀಕ್ಷಿತ ಪ್ರೋತ್ಸಾಹ ನೀಡುವ ಕಾರ್ಯ ಆಗುತ್ತಿಲ್ಲ. ಹಲವು ಕ್ಷೇತ್ರದಲ್ಲಿ ಪ್ರಾಧಾನ್ಯತೆ ಸಿಗುತ್ತಿದೆ. ಇತ್ತೀಚೆಗೆ ವಿಜ್ಞಾನ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕಾರ್ಯ ಆಗುತ್ತಿದೆ. 45 ಮಹಿಳಾ ಸಾಧಕಿಯರಿಗೆ ನೊಬೆಲ್ ಪಾರಿತೋಷಕ ಲಭಿಸಿದೆ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಬರುವುದು ಕಡಿಮೆ ಆಗುತ್ತಿದೆ. ನಿಧಾನವಾಗಿ ಮಹಿಳೆಯರಿಗೆ ವಿಜ್ಞಾನ ಕ್ಷೇತ್ರದತ್ತ ಜಾಗೃತಿ ಮೂಡುತ್ತಿದೆ. ಮಹಿಳಾ ವಿಜ್ಞಾನಿಗಳನ್ನು ಕೇರಳ, ತಮಿಳುನಾಡಿನಲ್ಲಿ ಹೆಚ್ಚು ಕಾಣುತ್ತಿದ್ದೇವೆ. ಎಲ್ಲಾ ರಾಜ್ಯದಲ್ಲಿ ಇವರ ಸಂಖ್ಯೆ ಹೆಚ್ಚಾಗಬೇಕು ಎಂದರು.
ಮಹಿಳೆಯರಿಗಾಗಿ, ಅವರ ಗೌರವಕ್ಕಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ನ ಬಹುದೊಡ್ಡ ಹೆಗ್ಗಳಿಕೆ. ವಿಜ್ಞಾನ ಹಾಗೂ ತಂತ್ರಜ್ಞಾನ ಒಟ್ಟಾದರೆ ಅಲ್ಲಿ ಅಭಿವೃದ್ಧಿ ನಿರೀಕ್ಷಿಸಬಹುದು. ಇದು ದೀರ್ಘಾವಧಿ ಸಾಧನೆಗೆ ನಾಂದಿಯಾಗಲಿದೆ. ಉತ್ತಮವಾದ ರೀತಿ ವಿಜ್ಞಾನದ ಪ್ರಸರಣ ಆದರೆ ಪ್ರಗತಿ ಸಾಧ್ಯ. ಉತ್ತಮ ರೀತಿಯಲ್ಲಿ ಜನರನ್ನು ಸೇರಿಸಿ ವಿಜ್ಞಾನದ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿ ವರ್ಷ ಪ್ರಧಾನಮಂತ್ರಿಗಳನ್ನು ಕರೆಸಿ ಉದ್ಘಾಟಿಸುತ್ತಿರುವುದು ಹೆಚ್ಚಿನ ಪ್ರೇರಣೆ ತಂದುಕೊಡುತ್ತಿದೆ. ಅವರ ಮಾರ್ಗದರ್ಶನ, ಸಹಕಾರ ಸಿಗುತ್ತಿರುವುದು ಮಹತ್ವದ ವಿಚಾರ. ಇಂದು ಸಮಾಜಕ್ಕೆ ಸೇವೆ ಸಲ್ಲಿಸುವುದು ಅತ್ಯಗತ್ಯ. ಮಹಿಳೆಯರನ್ನು ಒಗ್ಗೂಡಿಸಿ ಕರೆದೊಯ್ಯುವುದು ಮಹತ್ವದ ವಿಚಾರ. ಹಲವು ದಶಕಗಳಿಂದ ಮಹಿಳೆಯರಿಗೆ ಪ್ರಾಧಾನ್ಯತೆ ಕೊಡುವ ಕಾರ್ಯ ಆಗುತ್ತಿದೆ. ಮಹಿಳೆಯರನ್ನು ಗೌರವಿಸುವ, ಆಧರಿಸುವ ಸಮ್ಮಾನಿಸುವ ಕಾರ್ಯ ಆಗಬೇಕು. ದೇವತೆಗಳ ಮೇಲಿರುವ ನಮ್ಮ ಗೌರವ ಎಲ್ಲಾ ಮಹಿಳೆಯರಿಗೆ ನೀಡುವ ಕಾರ್ಯ ಆಗಬೇಕು. ಆಗ ದೇಶದ ಪ್ರಗತಿ ಸಾಧ್ಯ. ಇದರಿಂದ ಸಮ ಸಮಾಜ ನಿರ್ಮಾಣ ಆಗಲಿದೆ. ಸಮಾನತೆಗೆ ಬೆಲೆ ಸಿಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಐಎಸ್ಸಿಎ ಪ್ರಧಾನ ಅಧ್ಯಕ್ಷ ಕೆ.ಎಸ್. ರಂಗಪ್ಪ, ಡಾ. ಅನುಪ್ ಕುಮಾರ್ ಜೈನ್, ಡಾ. ಥೇಸಿ ಥಾಮಸ್, ಮಹಾಪಾತ್ರಾ, ಪ್ರೊ. ಎಸ್. ರಾಜೇಂದ್ರ ಪ್ರಸಾದ್, ಪ್ರೋ. ವಿಜಯಲಕ್ಷ್ಮಿ ಸಕ್ಸೇನಾ, ಪದ್ಮಾವತಿ, ನಮಿತಾ ಗುಪ್ತಾ, ಎಸ್.ಜಿ. ಅಶ್ವತ್ತನಾರಾಯಣ ಮತ್ತಿತರರು ಉಪಸ್ಥಿತರಿದ್ದರು.