ಬೆಂಗಳೂರು : ಮಹಿಳೆಯರು ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಬಲವಾಗಿ ಬೇರೂರಲು "ಮಹಿಳಾ ಉದ್ಯಮ ಸ್ನೇಹಿ" ವಾತಾವರಣ ನಿರ್ಮಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಭಿಪ್ರಾಯಪಟ್ಟಿರು.
"ಉಬುಂಟು" ಮತ್ತು "ಗ್ಲೋಬಲ್ ಅಲೈಯನ್ಸ್ ಆಫ್ ಮಾಸ್ ಎಂಟರ್‌ಪ್ರೆನ್ಯೂರ್‌ಶಿಪ್" (ಗೇಮ್) ಸಹಯೋಗದಲ್ಲಿ ಆಯೋಜಿಸಿದ್ದ ಸಂವಾದ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಉದ್ಯಮ ಕ್ಷೇತ್ರದತ್ತ ಹೆಚ್ಚು ಮುಖ ಮಾಡುತ್ತಿರುವುದು ಸಂತೋಷದ ವಿಚಾರ. ಆದರೆ, ಅವರಿಗೆ ಅಷ್ಟೆ ಪ್ರಮಾಣದಲ್ಲಿ ಬೆಂಬಲದ ಅಗತ್ಯವಿದೆ. ಸರ್ಕಾರ ಮಹಿಳಾ ಉದ್ಯಮಿಗಳನ್ನು ಬೆಳೆಸಲು ಸಾಕಷ್ಟು ಕಾರ್ಯಕ್ರಮ ತಂದಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಹಿಳೆಯರಿಗೆ ತಲುಪುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಮಹಿಳಾ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡಿದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಉದ್ಯಮದತ್ತ ಆಸಕ್ತಿ ತೋರುತ್ತಾರೆ ಎಂದರು.
![Women Entrepreneurs Conference in Bengaluru](https://etvbharatimages.akamaized.net/etvbharat/prod-images/10690813_.jpg)
ಈಗಾಗಲೇ ಉದ್ಯಮ ಪ್ರಾರಂಭಿಸಿರುವ ಅಥವಾ ಪ್ರಾರಂಭಿಸುವ ಯೋಜನೆ ಇಟ್ಟುಕೊಂಡಿರುವ ಮಹಿಳೆಯರಿಗೆ "ಉಬುಂಟು" ಹಾಗೂ "ಗೇಮ್" ಸಂಸ್ಥೆಗಳು ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ. ಮಹಿಳೆಯರು ಯಾವ ಉದ್ಯಮ ತೆರೆಯಬಹುದು, ಉದ್ಯಮದಲ್ಲಿ ಎದುರಾಗುವ ಹಣಕಾಸು, ಕಾನೂನು ಅಥವಾ ಯಾವುದೇ ರೀತಿಯ ಸಮಸ್ಯೆಯಾಗಿದ್ದರೂ ಉಬುಂಟು ಮಹಿಳೆಯರ ಜೊತೆ ನಿಂತು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
"ಉಬುಂಟು" ಸಂಸ್ಥಾಪಕಿ ಹಾಗೂ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಮಾತನಾಡಿ, “ಭಾರತದಲ್ಲಿ ಮಹಿಳಾ ಉದ್ಯಮಶೀಲತೆ ಶೇ 15 ರಷ್ಟು ನಷ್ಟವಾಗುತ್ತಿದೆ. ಮಹಿಳಾ ಉದ್ಯಮಿಗಳ ಸ್ಕೇಲಿಂಗ್ ವೇಗಗೊಳಿಸುವ ಮೂಲಕ ಹೊಸದಾಗಿ ಉದ್ಯಮ ಪ್ರಾರಂಭಿಸುವ ಮಹಿಳೆಯರಿಗೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಉಬುಂಟು ಮಹಿಳೆಯರ ಆಶಾಕಿರಣವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳನ್ನು ಅಭಿನಂದಿಸಲಾಯಿತು.