ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಲ್ಲದೆ, ಕುಟುಂಬಸ್ಥರಿಗೆ ಮತ್ತು ಸಂಬಂಧಿಕರಿಗೆ ಆಕಸ್ಮಿಕ ಸಾವು ಎಂದು ನಂಬಿಸಿದ್ದರು. ಆದರೆ 15 ದಿನಗಳ ನಂತರ ಅದು ಕೊಲೆ ಎಂಬುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ.
ಚಂದ್ರಶೇಖರ್ (42)ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ಪುಷ್ಪಾ ಹಾಗೂ ಚಂದ್ರಶೇಖರ್ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಹಿಂದೆ ಘಟನೆಯೊಂದರಲ್ಲಿ ತಲೆಗೆ ಪೆಟ್ಟಾಗಿ ಚಂದ್ರಶೇಖರ್ ತಲೆಗೆ ಗಂಭೀರ ಗಾಯವಾಗಿತ್ತು. ಆ ಬಳಿಕ ಅವರು ಫಿಟ್ಸ್‌ನಿಂದ ಬಳಲುತ್ತಿದ್ದರು.
ಇದೇ ಫೆಬ್ರವರಿ 21ರ ರಾತ್ರಿ ಚಂದ್ರಶೇಖರ್ ಸಾವನ್ನಪ್ಪಿದ್ದು, ಬಾತ್ ರೂಂನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಗಿ ಅವರ ಪತ್ನಿ ಕುಟುಂಬಸ್ಥರಿಗೆ ಹೇಳಿದ್ದರು. ಹಾಗಾಗಿ ಆಕಸ್ಮಿಕ ಮರಣ ಎಂದು ಎಲ್ಲರೂ ನಂಬಿದ್ದರು.
ಬಳಿಕ ಮೈಸೂರಿನ ಕೆಆರ್ ನಗರದ ಚಿನಕುರುಳಿ ಗ್ರಾಮದಲ್ಲಿ ಚಂದ್ರಶೇಖರ್ ತಿಥಿ ಕಾರ್ಯ ನಡೆಯುವಾಗ ಆರೋಪಿ ಪುಷ್ಪಾಳ ಪ್ರಿಯಕರ ಮನು ಎಂಬಾತ ಸ್ಥಳಕ್ಕೆ ಬಂದ್ದಿದ್ದಾನೆ. ಬೆಂಗಳೂರಿನಲ್ಲಿರುವ ವ್ಯಕ್ತಿ ಇಲ್ಲಿಗೇಕೆ ಬಂದ ಎಂದು ಕುಟುಂಬದ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಮನು ಹಾಗೂ ಪುಷ್ಪಾ ನಡುವಿನ ಅಕ್ರಮ ಸಂಬಂಧ ಬಯಲಾಗಿದೆ. ಈ ಘಟನೆ ಬೆನ್ನಲ್ಲೆ ಆಕೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾಳೆ.
ಇದಾದ ಬಳಿಕ ಚಂದ್ರಶೇಖರ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ವರ್ತೂರು ಪೊಲೀಸರು ಆರೋಪಿ ಪುಷ್ಪಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ರಾಡ್ನಿಂದ ಹೊಡೆದು ಕೊಲೆ
ಪುಷ್ಪಾ ಮತ್ತು ಮನು ಮೊದಲೇ ಕೊನೆಯ ಪ್ಲಾನ್ ಮಾಡಿಕೊಂಡಿದ್ದಾರೆ. ಫೆಬ್ರವರಿ 21 ರಂದು ಕೆಲಸದಿಂದ ಚಂದ್ರಶೇಖರ್ ಮನೆಗೆ ವಾಪಸ್ ಬರುವ ಮೊದಲೇ ಮನೆ ಒಳಗೆ ಅವಿತುಕೊಂಡಿದ್ದ ಆರೋಪಿ ಮನು, ಚಂದ್ರಶೇಖರ್ ತಲೆಗೆ ರಾಡ್ನಿಂದ ಹೊಡೆದು ಸಾಯಿಸಿದ್ದಾನೆ. ಬಳಿಕ ಬಾತ್ ರೂಂನಲ್ಲಿ ಕಾಲುಜಾರಿ ಬಿದ್ದು ಚಂದ್ರಶೇಖರ್ ಮೃತಪಟ್ಟಿದ್ದಾಗಿ ಕುಟುಂಬದವರಿಗೆ ಮತ್ತು ಸಂಬಂಧಿಕರಿಗೆ ನಂಬಿಸಿದ್ದರು ಎಂದು ತಿಳಿದುಬಂದಿದೆ.