ಬೆಂಗಳೂರು: ಮಹಿಳೆಯೊಬ್ಬರು ಹ್ಯಾಕರ್ಸ್ ಹಾವಳಿಯಿಂದ ಬೇಸತ್ತು ಬಸವನಗುಡಿಯ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ.
ಬಸವನಗುಡಿ ನಿವಾಸಿಯಾದ 36 ವರ್ಷದ ವಿವಾಹಿತ ಮಹಿಳೆ ಹಾಗೂ ಆಕೆಯ ಸ್ನೇಹಿತರು ಸೇರಿಕೊಂಡು ವಾಟ್ಸ್ಆ್ಯಪ್ ಗ್ರೂಪ್ ರಚನೆ ಮಾಡಿಕೊಂಡಿದ್ದರು. ಆ ಗ್ರೂಪಿನಲ್ಲಿ ಮಹಿಳೆ ಕೂಡ ಅಡ್ಮಿನ್ ಆಗಿದ್ದರು. ಆದರೆ ಇತ್ತೀಚೆಗೆ ಮಹಿಳೆಗೆ ಅಪರಿಚಿತರೊಬ್ಬರು ಕರೆ ಮಾಡಿ ನಾವು ನಿಮಗೆ ಒಂದು ಲಿಂಕ್ ಕಳುಹಿಸಿದ್ದೇವೆ ಅದನ್ನು ಕ್ಲಿಕ್ ಮಾಡಿ ಎಂದಿದ್ದಾರೆ.
ಅನಾಮಿಕರ ಮಾತನ್ನ ನಂಬಿದ ಮಹಿಳೆ, ಅವರು ಕಳಿಸಿರುವ ಲಿಂಕ್ ಓಪನ್ ಮಾಡಿದ್ದಾರೆ. ಆ ಬಳಿಕ ಮೊಬೈಲ್ ಹ್ಯಾಕ್ ಆಗಿದೆ. ಮಹಿಳೆಯ ನಂಬರ್ ನಿಂದ ಸ್ನೆಹಿತರು ಸೇರಿಕೊಂಡು ಮಾಡಿರುವ ಗ್ರೂಪ್ಗೆ ಮಹಿಳೆಯ ನಂಬರ್ ನಿಂದ ಅಶ್ಲೀಲ ಮೆಸೇಜ್, ಅಶ್ಲೀಲ ವಿಡಿಯೋ ರವಾನೆಯಾಗಿದೆ. ಅಷ್ಟು ಮಾತ್ರವಲ್ಲದೇ ಮಹಿಳೆಯ ಜೊತೆ ಆತ್ಮೀಯರಿರುವ ಪ್ರತಿಯೊಬ್ಬರ ಮೊಬೈಲ್ಗೆ ಇದೇ ರೀತಿ ಫೋಟೋ ವಿಡಿಯೋ ಸೆಂಡ್ ಆಗಿದೆ.
ಇದರಿಂದ ಭಯಭೀತಳಾದ ಮಹಿಳೆ ಕರೆ ಬಂದ ನಂಬರ್ಗೆ ಮತ್ತೆ ಕರೆ ಮಾಡಿದಾಗ ನಿಮ್ಮ ಹಾಟ್ ಫೋಟೋ ಕಳುಹಿಸಿ, ಒಂದೊಂದು ಫೋಟೊಗೆ ಇಂತಿಷ್ಟು ಹಣ ಕೊಡ್ತೀವಿ ಎಂದು ಕಾಲ್ ಹಾಗೂ ಮೆಸೇಜ್ ಮುಖಾಂತರ ತಿಳಿಸಿದ್ದಾರೆ. ಇನ್ನು ಈ ವಿಚಾರ ತಿಳಿದು ಮಹಿಳೆ ಶಾಕ್ ಆಗಿ ನಗರದ ದಕ್ಷಿಣ ವಿಭಾಗದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ವಿಚಾರಣೆ ಕೈಗೊಳ್ಳಲಾಗಿದೆ.