ಬೆಂಗಳೂರು: ಪ್ರಕರಣದ ವಕೀಲಿಕೆ ವಹಿಸುವಂತೆ ಕೇಳಿಬಂದ ಮಹಿಳೆಯೊಬ್ಬಳು ಭೂಗತ ಪಾತಕಿಗಳ ಹೆಸರಿನಲ್ಲಿ ವಕೀಲರೊಬ್ಬರ ಬಳಿ ಸುಲಿಗೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ಲಕ್ಷ್ಮೀಶ್ ಎಂಬುವವರಿಗೆ ಹಣ ನೀಡುವಂತೆ ಮಹಿಳೆಯೊಬ್ಬರು ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಪ್ರಕರಣದ ಹಿನ್ನೆಲೆ: ವರ್ಷಗಳ ಹಿಂದೆ ಬನಶಂಕರಿ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಹಾಗೂ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣದ ವಕೀಲಿಕೆ ಮಾಡುವಂತೆ ವಕೀಲ ಲಕ್ಷ್ಮೀಶ್ ಬಳಿ ಮಹಿಳೆ ಬಂದಿದ್ದಾರೆ. ನಂತರ ಇಬ್ಬರ ನಡುವೆ ಹಣಕಾಸಿನ ಸಮಸ್ಯೆ ಉಂಟಾಗಿದೆ. ಸುಲಿಗೆಗೆ ಮುಂದಾಗಿದ್ದ ಆರೋಪಿ ಮಹಿಳೆ ನವೆಂಬರ್ 28ರ ರಾತ್ರಿ ಬನಶಂಕರಿ 3ನೇ ಹಂತದಲ್ಲಿರುವ ಲಕ್ಷ್ಮೀಶರ ಕಚೇರಿಗೆ ಮೂರ್ನಾಲ್ಕು ಯುವಕರನ್ನ ಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಡ್ರ್ಯಾಗರ್ ತೋರಿಸಿ ಇಪ್ಪತ್ತು ಲಕ್ಷ ಕೊಡುವಂತೆ ಲಕ್ಷ್ಮೀಶ್ ಗೆ ಧಮ್ಕಿ ಹಾಕಿದ್ದ ಆರೋಪಿಗಳು, ಬಳಿಕ ಮಹಿಳೆಗೆ ಕರೆ ಮಾಡಿ ಮಾತನಾಡುವಂತೆ ಲಕ್ಷ್ಮೀಶ್ ಕೈಗೆ ಫೋನ್ ನೀಡಿದ್ದಾರೆ. ಫೋನ್ನಲ್ಲಿ ಮಾತನಾಡಿದ್ದ ಮಹಿಳೆ ನಾನು ಮಲೇಷಿಯಾ, ಸಿಂಗಾಪುರದಲ್ಲಿದ್ದವಳು. ತನಗೆ ಡಾನ್ಗಳ ನಂಟಿದೆ. ಕೇಳಿದಷ್ಟು ಹಣ ಕೊಡದಿದ್ದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗ್ತಿದೆ.
ಇದನ್ನೂ ಓದಿ: ಮಹಿಳಾ ಪಿಜಿಯಲ್ಲಿ ಕ್ಯಾಮೆರಾ ಇಟ್ಟು ಲೈಂಗಿಕ ಶೋಷಣೆ: ಸಿಇಎನ್ ಪೊಲೀಸರಿಂದ ಆರೋಪಿ ಬಂಧನ
ಸ್ವಲ್ಪ ಸಮಯದ ಬಳಿಕ ಕಚೇರಿಯಿಂದ ಹೊರ ಹೋಗುವಾಗ ಮತ್ತೆ ಏಳು ಜನರ ತಂಡ ಲಕ್ಷ್ಮೀಶ್ ಅವರನ್ನ ಅಡ್ಡಗಟ್ಟಿ ನಿರ್ಜನ ಪ್ರದೇಶದ ಪಾರ್ಕಿಗೆ ಕರೆದೊಯ್ದು ಹಣ ಕೊಡು ಎಂದು ಧಮ್ಕಿ ಹಾಕಿದ್ದಾರಂತೆ. ಭಯಗೊಂಡ ಲಕ್ಷ್ಮೀಶ್ ಮೂರು ದಿನ ಸಮಯ ಕೊಡಿ ಎಂದು ಭಾವನಾಳ ಬಳಿ ಕೇಳಿದ್ದರಂತೆ. ಲಕ್ಷ್ಮೀಶ್ ಸದ್ಯ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.