ಬೆಂಗಳೂರು: ನಗರದ ಮಹಿಳಾ ಟೆಕ್ಕಿಯೊಬ್ಬರು ಯುವಕನೊಬ್ಬನ ವಿರುದ್ಧ ಪೊಲೀಸರಿಗೆ ಲವ್ ಜಿಹಾದ್ ಕುರಿತು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಲು ಜಮ್ಮು ಕಾಶ್ಮೀರಕ್ಕೆ ತೆರಳಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ: ಎಲೆಕ್ಟ್ರಾನಿಕ್ಸ್ ಸಿಟಿಯ ಶಿಕಾರಿಪಾಳ್ಯದಲ್ಲಿ ವಾಸವಿದ್ದ ಮೊಜೀಫ್ ಅಶ್ರಫ್ ಬೇಗ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಕಾರಿಪಾಳ್ಯದಲ್ಲಿ ಯುವತಿಯನ್ನು ಭೇಟಿಯಾಗಿ ಸ್ನೇಹ ಬೆಳೆಸಿದ್ದನು. ನಂತರ ಇಬ್ಬರೂ ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿದ್ದ ಬೇಗ್ ದೈಹಿಕ ಸಂಬಂಧ ಬೆಳೆಸಿದ್ದಾನೆ. ಯಾವುದೇ ಧಾರ್ಮಿಕ ಸಂಪ್ರದಾಯಗಳಿಲ್ಲದೆ ನ್ಯಾಯಾಲಯದಲ್ಲಿಯೇ ಮದುವೆಯಾಗುವುದಾಗಿ ಭರವಸೆಯನ್ನೂ ನೀಡಿದ್ದಾನೆ. ಆದರೆ ಲೈಂಗಿಕವಾಗಿ ಬಳಸಿಕೊಂಡ ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಇದನ್ನು ಯುವತಿ ನಿರಾಕರಿಸಿದ್ದಾರೆ. ಬೇಗ್ ಸಹೋದರ ಮೊರಿಫ್ ಅಶ್ರಫ್ ಎಂಬಾತ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕಾಯ್ದೆಯಡಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಶೇಷ ತನಿಖಾ ತಂಡ ಜಮ್ಮು ಕಾಶ್ಮೀರಕ್ಕೆ ತೆರಳಿದೆ.
ಇದನ್ನೂ ಓದಿ: ಟ್ವೀಟ್ ಮೂಲಕ ಲವ್ ಜಿಹಾದ್ ಆರೋಪ ಮಾಡಿದ ಯುವತಿ.. ಅಧಿಕೃತ ದೂರು ನೀಡುವಂತೆ ಸೂಚನೆ ನೀಡಿದ ಬೆಂಗಳೂರು ಪೊಲೀಸರು