ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಶಿಕ್ಷಕಿಯನ್ನು ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಡಿಸೆಂಬರ್ 25ರಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು ತಡವಾಗಿ ವರದಿಯಾಗಿದೆ. ಚಾಮರಾಜಪೇಟೆ ಸಮೀಪದ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷ ವಯಸ್ಸಿನ ಯುವತಿ ನೀಡಿದ ದೂರಿನನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: ದೂರುದಾರರು ಡಿಸೆಂಬರ್ 25ರಂದು ಸಂಜೆ 6:45ರ ಸುಮಾರಿಗೆ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಿಂದ ವೈಟ್ ಫೀಲ್ಡ್ ಮಾರ್ಗವಾಗಿ ಹೊರಟಿದ್ದರು. ಮೆಜೆಸ್ಟಿಕ್ ನಿಲ್ದಾಣದ ಬಳಿ ಮಾರ್ಗ ಬದಲಾವಣೆಗಾಗಿ ಇಳಿಯುವ ಸಂದರ್ಭದಲ್ಲಿ ಅದೇ ಬೋಗಿಯಲ್ಲಿದ್ದ ಆರೋಪಿ, ಯುವತಿಯ ದೇಹದ ಹಿಂಭಾಗ ಸ್ಪರ್ಶಿಸಿದ್ದಾನೆ. ಈ ಬಗ್ಗೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಅವರು ಮಾಹಿತಿ ನೀಡಿದ್ದರು. ತಕ್ಷಣ ಆತನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಉಪ್ಪಾರಪೇಟೆ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಮೆಟ್ರೋ ರೈಲಿನಲ್ಲಿ ವರದಿಯಾದ ಇತ್ತೀಚಿನ ಅಪರಾಧ ಪ್ರಕರಣಗಳು ಹೀಗಿವೆ.
ಪ್ರಕರಣ-1: ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಕಾಲೇಜು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ನವೆಂಬರ್ 20ರಂದು ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆದರೆ ಯಾವುದೇ ದೂರು ದಾಖಲಾಗಿರಲಿಲ್ಲ.
ಪ್ರಕರಣ-2: ಡಿಸೆಂಬರ್ 7ರಂದು ಮೆಟ್ರೋದಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಭದ್ರತಾ ಸಿಬ್ಬಂದಿ ಹಿಡಿದು ಉಪ್ಪಾರಪೇಟೆ ಠಾಣಾ ಪೊಲೀಸರಿಗೊಪ್ಪಿಸಿದ್ದರು. ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ್ದ 22 ವರ್ಷದ ಯುವತಿಯ ಮೈ ಕೈ ಮುಟ್ಟಿದ್ದ ಆರೋಪಿ ಕಿರುಕುಳ ನೀಡಿದ್ದ. ಯುವತಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದು ಉಪ್ಪಾರಪೇಟೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು.
ಪ್ರಕರಣ-3: ಮಹಿಳೆಯೊಂದಿಗೆ ಮೆಟ್ರೋದಲ್ಲಿ ಅನುಚಿತವಾಗಿ ವರ್ತಿಸಿದ್ದ ಕಿಡಿಗೇಡಿಗೆ ಸಹ ಪ್ರಯಾಣಿಕರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಸುಬ್ರಹ್ಮಣ್ಯಪುರದಲ್ಲಿ ನಡೆದಿತ್ತು.
ಇದನ್ನೂ ಓದಿ: ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದ ಊಬರ್ ಚಾಲಕ.. ಆರೋಪ