ಬೆಂಗಳೂರು: ಟಿಕೆಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಕೋಪಗೊಂಡ ಮಹಿಳಾ ಪ್ರಯಾಣಿಕರೊಬ್ಬರು ಬಿಎಂಟಿಸಿ ಮಹಿಳಾ ಕಂಡಕ್ಟರ್ ಮುಖವನ್ನು ಉಗುರುಗಳಿಂದ ಪರಚಿ ಗಾಯಗೊಳಿಸಿದ್ದಾರೆ. ಈ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಬಿಎಂಟಿಸಿ ನಿರ್ವಾಹಕಿ ಸುಕನ್ಯಾ ಅವರು ಆರೋಪಿ ಪ್ರಯಾಣಿಕೆ ಮೋನಿಷಾ (29) ವಿರುದ್ಧ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಮತ್ತಿಕೆರೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿ ಉದ್ಯೋಗಿಯಾಗಿರುವ ಮೋನಿಷಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ: ಚಿಕ್ಕಬಾಣವಾರ ನಿವಾಸಿ ಮೋನಿಷಾ ಬೆಳಿಗ್ಗೆ 10.30ರ ಸುಮಾರಿಗೆ ನಗರದ 8ನೇ ಮೈಲಿಯಿಂದ ದಾಸರಹಳ್ಳಿಗೆ ತೆರಳಲು ಮೆಜೆಸ್ಟಿಕ್-ನೆಲಮಂಗಲ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ್ದಾರೆ. ನಿರ್ವಾಹಕಿ ಸುಕನ್ಯಾ, ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಆಗ ಮೋನಿಷಾ, ಆಧಾರ್ ಕಾರ್ಡ್ ತೋರಿಸಲು ತಡ ಮಾಡಿದರು. ಇದರಿಂದ ಅಸಮಾಧಾನಗೊಂಡ ನಿರ್ವಾಹಕಿ, ಏರುಧ್ವನಿಯಲ್ಲಿ ಬೇಗನೇ ತೋರಿಸಬೇಕು ಎಂದು ಸೂಚಿಸಿದ್ದಾರೆ.
ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿ ಕೋಪಗೊಂಡ ಮೋನಿಷಾ, ನಿರ್ವಾಹಕಿ ಸುಕನ್ಯಾ ಮೇಲೆ ಹಲ್ಲೆ ನಡೆಸಿ, ಉಗುರಿನಿಂದ ಮುಖಕ್ಕೆ ಪರಚಿದ್ದಾರೆ. ಇದನ್ನು ಗಮನಿಸಿದ ಕೆಲವು ಮಹಿಳಾ ಪ್ರಯಾಣಿಕರು ಮೋನಿಷಾರನ್ನು ತರಾಟೆಗೆ ತೆಗೆದುಕೊಂಡರು. ಆಗ ಮೋನಿಷಾ, ಮೊದಲು ನಿರ್ವಾಹಕಿಯೇ ನನಗೆ ಹೊಡೆದರು, ಆಕಸ್ಮಿಕವಾಗಿ ಮುಖಕ್ಕೆ ಉಗುರು ಪರಚಿತು ಎಂದಿದ್ದಾರೆ.
ಇಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆ ಬಸ್ ಚಾಲಕ ರಸ್ತೆ ಮಧ್ಯೆ ಬಸ್ ನಿಲ್ಲಿಸಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಗೆ ಸುಕನ್ಯಾ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೋನಿಷಾಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಗುಂಡು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ರೌಡಿಶೀಟರ್ ಆಸ್ಪತ್ರೆಯಿಂದ ಎಸ್ಕೇಪ್