ಬೆಂಗಳೂರು: ಚಾಕುವಿನಿಂದ ಇರಿದು ಮಹಿಳೆವೋರ್ವಳನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕೋಲ್ಕತ್ತಾ ಮೂಲದ ಅಲೀಂ ಅಬಿ (35) ಹತ್ಯೆಯಾದ ಮಹಿಳೆ. ಬ್ರೂಕ್ ಫೀಲ್ಡ್ 2ನೇ ಹಂತದ ನಡು ರಸ್ತೆಯಲ್ಲಿ ರಫೀಕ್ ಎಂಬಾತ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಗರದ ಮನೆಯೊಂದರಲ್ಲಿ ಮನೆಗೆಲಸ ಮಾಡಿಕೊಂಡಿದ್ದ ಅಲೀಂ ಅಬಿ ಅವರಿಗೆ ರಫೀಕ್ ಎಂಬಾತನ ಜೊತೆ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿತ್ತು. ಎಂದಿನಂತೆ ಇಂದು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ರಫೀಕ್ ನಡು ರಸ್ತೆಯಲ್ಲೇ ಚಾಕುವಿನಿಂದ ಅಲೀಂಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ.
ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹೆಚ್ಎಎಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಐಪಿಸಿ ಸೆಕ್ಷನ್ 307 ಅಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸದ್ಯ ಪೊಲೀಸರು ಕೊಲೆಗೆ ನಿಖರವಾದ ಕಾರಣವೇನು? ಪರಾರಿಯಾಗಿರುವ ಆರೋಪಿ- ಕೊಲೆಯಾಗಿರುವ ಮಹಿಳೆ ನಡುವೆ ಇದ್ದ ನಂಟಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಓದಿ: ಯುವತಿಯ ಪ್ರೀತಿ ಬಲೆಗೆ ಬಿದ್ದ ಬಾಲಕ: ಬುದ್ಧಿ ಮಾತು ಕೇಳದ್ದಕ್ಕೆ ಕೈಕಾಲು ಕಟ್ಟಿ ಭೀಮಾ ನದಿಗೆ ಎಸೆದ ಕಿರಾತಕರು!