ಬೆಂಗಳೂರು : ಲೈಂಗಿಕ ದೌರ್ಜನ್ಯ ಹಾಗೂ ಸುಳ್ಳು ಪ್ರಕರಣ ದಾಖಲಿಸಿ ತನ್ನ ಮೇಲೆ ಹೆಣ್ಣೂರು ಪೊಲೀಸ್ ಇನ್ಸ್‌ಪೆಕ್ಟರ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ಗೆ ದೂರು ನೀಡಿದ್ದಾರೆ.
ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮಹಿಳೆ ದೂರು ನೀಡಿದ್ದಾರೆ. ಮಹಿಳೆ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದೆ, ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯವೆಸಗಿ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತಿ, ಮಕ್ಕಳೊಂದಿಗೆ ಮಹಿಳೆ ವಾಸ : ಮಹಿಳೆ ಕಳೆದ ಒಂದೂವರೆ ವರ್ಷದ ಹಿಂದೆ ಅಕ್ಕ-ತಂಗಿಯರಾದ ಸುಮತಿ-ವರಲಕ್ಷ್ಮಿಗೆ ಎಂಬುವರಿಗೆ ಮನೆಯನ್ನು ಲೀಸ್ಗೆ ನೀಡಿದ್ದರು. ಮನೆಗೆ ಬಂದು ವರ್ಷವಾದರೂ ನೀರಿನ ಬಿಲ್ ಕಟ್ಟಿರಲಿಲ್ಲವಂತೆ. ಇದನ್ನ ಮನೆ ಮಾಲೀಕರು ಪ್ರಶ್ನಿಸಿದಾಗ, ಬಾಡಿಗೆದಾರರು ಅವರೊಂದಿಗೆ ಮಾತಿನ ಚಕಮಕಿ ನಡೆಸಿ, ಹಲ್ಲೆ ಸಹ ಮಾಡಿದ್ದಾರೆ.
ವರಲಕ್ಷ್ಮಿ ಗಂಡ ಸಂತ್ರಸ್ತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದರೆ, ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿಲ್ಲ. ಅಲ್ಲದೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ತೋರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ರಾಜಕೀಯ ವೈಷಮ್ಯ; ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಹತ್ಯೆಗೆ ಯತ್ನ..!
ದೂರಿನಲ್ಲಿ ಏನಿದೆ? : ಹಲ್ಲೆ ಸಂಬಂಧ ನನ್ನನ್ನು ಠಾಣೆಗೆ ಕರೆಸಿ ಇನ್ಸ್‌ಪೆಕ್ಟರ್ ವಸಂತಕುಮಾರ್ ತಮ್ಮ ಚೇಂಬರ್ಗೆ ಕರೆಸಿಕೊಂಡರು. ನೋಡು ನಿನಗೆ ಎರಡು ಆಯ್ಕೆ ಕೊಡುತ್ತೇನೆ. ಒಂದು ನೀನು ನನಗೆ ಐದು ಲಕ್ಷ ಹಣ ಕೊಡು, ಇಲ್ಲ ಕರೆದಾಗಲೆಲ್ಲ ನನ್ನ ಜೊತೆ ಬರಬೇಕು ಎಂಬ ಬೇಡಿಕೆ ಇಟ್ಟಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಸಿಪಿದ್ದಾರೆ.
ನಾನು ಮರ್ಯಾದಸ್ತ ಕುಟುಂಬದವಳು, ನೀವು ಕೇಸನ್ನು ಹಾಕಿ ಎಂದು ಮಹಿಳೆ ಹೇಳಿದ್ದಾರೆ. ಅದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಜೊತೆ ನಾನೇ ನಿಂತು ಇನ್ನೂ ಹತ್ತು ಕೇಸ್ ಹಾಕಿಸುತ್ತೇನೆ ಎಂದು ಮೈಕೈ ಹಿಡಿದು ಎಳೆದಾಡಿ ಎಫ್‌ಐಆರ್ ಹಾಕಿದ್ದಾರೆ ಎಂಬುದು ಮಹಿಳೆಯ ಆರೋಪವಾಗಿದೆ. ಬಳಿಕ ಸಂತ್ರಸ್ತೆ ಒಂದು ತಿಂಗಳ ನಂತರ ಬೇಲ್ ಮೇಲೆ ಹೊರ ಬಂದಿದ್ದಾರೆ.
ಇದಾದ ನಂತರ ಸುಮತಿ ಮತ್ತು ಇತರರನ್ನು ಎತ್ತಿಕಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ್ದಾರೆ. ಈ ಸಂಬಂಧ ಮಹಿಳೆ ವೈದ್ಯಕೀಯ ವರದಿಯೊಂದಿಗೆ ದೂರು ನೀಡಿದರೂ ಸ್ವೀಕರಿಸದೆ ನಿನ್ನ ಮೇಲೆ ಇನ್ನೊಂದು ಅಟ್ರಾಸಿಟಿ ಪ್ರಕರಣ ಹಾಕಿಸುತ್ತೇನೆ ಎಂದು ಇನ್ಸ್‌ಪೆಕ್ಟರ್ ಬೆದರಿಸಿದ್ದಾರೆ. ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿ, ನಾನು ಒಪ್ಪದೇ ಇದ್ದಾಗ ಅವರು ಮಾತನಾಡಿದ ಆಡಿಯೋ ಇದ್ದ ನನ್ನ ಮೊಬೈಲ್ ಫೋನ್ ಒಡೆದು ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.