ನೆಲಮಂಗಲ(ಬೆಂಗಳೂರು): ಅತಿಯಾದರೆ ಅಮೃತಾ ಕೂಡ ವಿಷವಾಗುತ್ತದೆ ಎಂಬ ಮಾತು ಎಷ್ಟು ಸತ್ಯ ಎಂಬುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಆರೋಗ್ಯ ಸಮಸ್ಯೆಗೆ ವೈದ್ಯರು ಸೂಚಿಸಿದ್ದ ಮಾತ್ರೆಗಳನ್ನ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಸೇವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕು ಮಾಕಳಿ ಗ್ರಾಮದ ಚಂದ್ರಮ್ಮ(28) ಮೃತ ಮಹಿಳೆ. ಶುಕ್ರವಾರ ಸಂಜೆ ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಇವರು ಮಾತ್ರೆ ಸೇವಿಸಿದ್ದರಂತೆ. ಮಾತ್ರೆ ಓವರ್ಡೋಸ್ ಆಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಗೆ ಸಾಗುವ ಮಾರ್ಗ ಮಧ್ಯೆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಚಂದ್ರಮ್ಮ ಶಿವಮೊಗ್ಗ ಮೂಲದವರು. ಕೆಲಸ ಅರಸಿ ತಮ್ಮ ಕುಟುಂಬದೊಂದಿಗೆ ಮಾಕಳಿಗೆ ಬಂದು ನೆಲೆಸಿದ್ದರು. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ 8 ವರ್ಷಗಳಿಂದ ಉಸಿರಾಟ ಸಮಸ್ಯೆ ಹಾಗೂ ವಿಪರೀತ ತಲೆನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರು ಕೊಟ್ಟ ಮಾತ್ರೆಗಳನ್ನ ಸೇವಿಸುತ್ತಿದ್ದರು.
ನಿನ್ನೆ ಸಂಜೆ ತಲೆನೋವು ಹೆಚ್ಚಾದ ಹಿನ್ನೆಲೆ ಒಂದು ಪ್ರಮಾಣದ ಮಾತ್ರೆ ತಿನ್ನುವ ಬದಲು ಮೂರು ಪ್ರಮಾಣದಷ್ಟು ಮಾತ್ರೆ ಸೇವಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಮಹಿಳೆ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನ ಹಳ್ಳಿ ಪೊಲೀಸರು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಸ್ಯಾಂಪಲ್ಸ್ ತಗೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ಇದನ್ನೂ ಓದಿ: ತಂಬಾಕು ತಂದ ಅವಾಂತರ.. ಗ್ರಾಹಕನನ್ನು ಹಿಡಿದು ಥಳಿಸಿ ಕೊಲೆ ಮಾಡಿದ ತಂದೆ-ಮಗ!