ಬೆಂಗಳೂರು: ಅವರದ್ದು ಸ್ವರ್ಗಕ್ಕೆ ಕಿಚ್ಚು ಹಚ್ಚುವಂತ ಜೋಡಿ. ಗಂಡ ಹೆಂಡತಿ ಅನ್ಯೋನ್ಯವಾಗಿ ಬದುಕುತ್ತಿದ್ದರು. ಗಂಡನಿಗೆ ಹೆಂಡತಿಯೇ ಸರ್ವಸ್ವವಾಗಿದ್ದಳು. ಬಡವರಾದರು ಪ್ರೀತಿಯಲ್ಲಿ ಯಾವುದೇ ಕೊರತೆ ಇರಲಿಲ್ಲ. 6 ತಿಂಗಳ ಮಗುವಿಗೆ ಯಮನಂತೆ ಬಂದ ಖಾಯಿಲೆ ಇಡೀ ಕುಟುಂಬದ ಖುಷಿಯನ್ನೇ ಕೊಂದುಹಾಕಿದೆ.
ಸಂತೋಷ್ ಮತ್ತು ಪಲ್ಲವಿ ದಂಪತಿ ಮೂರು ವರ್ಷದ ಹಿಂದೆ ಮದುವೆ ಆಗಿದ್ದರು. ಮಂಡ್ಯ ಮೂಲದ ಸಂತೋಷ್ ಸುದ್ದಗುಂಟೆಪಾಳ್ಯದಲ್ಲಿ ಮನೆ ಮಾಡಿಕೊಂಡು ಖಾಸಗಿ ಲ್ಯಾಬ್ ಒಂದರಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ. ಗಂಡ ಹೆಂಡತಿ ಜೀವನ ನಡೆಸಲು ಯಾವುದೇ ಕೊರತೆ ಇರಲಿಲ್ಲ. ಆದರೆ, ಮಗುವಿಗೆ ವಕ್ಕರಿಸಿದ ಹೃದಯ ಸಂಬಂಧಿ ಖಾಯಿಲೆ ಮಗು ಹಾಗೂ ತಾಯಿಯನ್ನ ಬಲಿ ಪಡೆದಿದೆ.
6 ತಿಂಗಳಿಗೆ ಜನಿಸಿದ ಮಗುವಿಗೆ ಹೃದಯ ಸಂಬಂಧಿ ಖಾಯಿಲೆ: 3 ವರ್ಷದ ಹಿಂದೆ ಮದುವೆ ಆಗಿದ್ದ ಸಂತೋಷ್ ಹಾಗೂ ಪಲ್ಲವಿ ದಂಪತಿಗೆ 6 ತಿಂಗಳ ಮಗುವಿತ್ತು. ಇದೇ ಮಗು 9 ತಿಂಗಳ ಬದಲಾಗಿ 6 ತಿಂಗಳಿಗೆ ಜನಿಸಿತ್ತು. ಮಗು ಹುಟ್ಟಿದಾಗಿನಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿತ್ತು. ಒಂದು ತಿಂಗಳು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಸದ್ಯ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಗು ಇದ್ದಕ್ಕಿದ್ದಂತೆ ಮನೆಯಲ್ಲಿಯೇ ಸಾವನ್ನಪ್ಪಿದೆ. ಮಗು ಕಣ್ಮುಂದೆ ಸಾವನ್ನಪ್ಪಿದ್ದನ್ನ ಕಂಡ ತಾಯಿಗೆ ಜೀವನವೇ ಬೇಡ ಎನಿಸಿದೆ. ಪತಿಗೂ ವಿಷಯ ತಿಳಿಸದೇ ಡೆತ್ ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ 7.30 ಕ್ಕೆ ಕೆಲಸಕ್ಕೆ ತೆರಳಿದ್ದ ಸಂತೋಷ್ ಸಂಜೆ 5 ಗಂಟೆಗೆ ಮನೆಗೆ ವಾಪಸ್ ಬಂದಾಗ ವಿಚಾರ ಗೊತ್ತಾಗಿದೆ.
ಭಾವುಕಳಾಗಿ ಡೆತ್ ನೋಟ್ ಬರೆದಿರುವ ಪಲ್ಲವಿ, ಪತಿ ಸಂತೋಷ್ಗೆ ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಡೆತ್ ನೋಟ್ ನೋಡುವುದಾದರೆ ಪ್ರೀತಿಯ ಸಂತೋಷ್, ನೀನು ನನ್ನ ದೇವರು. ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀಯಾ. ಯಾವುದರಲ್ಲೂ ಕೊರತೆ ಮಾಡಲಿಲ್ಲ. ಅತಿ ಹೆಚ್ಚಾಗಿ ಪ್ರೀತಿ ತೋರಿದ್ದಿಯಾ. ಮಗು ಇವತ್ತು ಸಾವನ್ನಪ್ಪಿದೆ. ಮಗುವನ್ನು ಬಿಟ್ಟು ಬದುಕಲು ನನಗೆ ಆಗುವುದಿಲ್ಲ.
ಇದ್ದಷ್ಟು ದಿನ ನನ್ನನ್ನು ತಾಯಿಯಂತೆ ನೋಡಿಕೊಂಡಿದ್ದಿಯಾ. ನಿನ್ನ ಮಗುವಿಗೆ ತಾಯಿಯಾಗಿ ಇರಲು ಸಾಧ್ಯವಾಗಲಿಲ್ಲ. ಮುಂದಿನ ಜನ್ಮದಲ್ಲಿ ನಿನಗೆ ನಾನು ಮಗುವಾಗಿ ಹುಟ್ಟುತ್ತೇನೆ. ನನಗೆ ತಾಯಿಯಾಗಿರು ಎಂದು ಪಲ್ಲವಿ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು, ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ.
ಇದನ್ನು ಓದಿ:ಶಿವಮೊಗ್ಗ: ಹಿಜಾಬ್ ತೆಗೆಯಲ್ಲ ಎಂದು ಶಾಲೆ ಮುಂದೆಯೇ ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿನಿಯರು