ಬೆಂಗಳೂರು: ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪರಿಶೀಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಯಲಹಂಕ ನ್ಯೂಟೌನ್ನಲ್ಲಿ ವಾಸವಾಗಿದ್ದ ಮನೆಯಲ್ಲಿ ರೇಖಾ ಎಂಬಾಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿ ಸಂತೋಷ್ ಕೊಲೆ ಮಾಡಿರುವುದಾಗಿ ರೇಖಾಳ ಪೋಷಕರು ದೂರು ನೀಡಿದ್ದು, ಈ ಸಂಬಂಧ ಸಂತೋಷ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡು ಮೂಲದ ಸಂತೋಷ್ ಹಾಗೂ ರೇಖಾ ದಂಪತಿಗೆ ಒಂದು ವರ್ಷದ ಮಗುವಿದೆ. ಸಂತೋಷ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ ರೇಖಾ ಗೃಹಿಣಿಯಾಗಿದ್ದಳು. ಇಬ್ಬರು ನಡುವೆ ಅನೋನ್ಯತೆಯಿಂದಲೇ ಇದ್ದರು. ಕಾಲಕ್ರಮೇಣ ವರದಕ್ಷಿಣೆ ನೀಡುವಂತೆ ಸಂತೋಷ್ ಪೀಡಿಸುತ್ತಿದ್ದ. ಮದುವೆ ವೇಳೆ ಚಿನ್ನ ಹಾಗೂ ಹಣವನ್ನು ವರದಕ್ಷಿಣೆ ರೂಪದಲ್ಲಿ ರೇಖಾ ಮನೆಯವರು ನೀಡಿದ್ದರು. ಅಷ್ಟಾದರೂ ಮತ್ತೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಈ ಮಧ್ಯೆ ಸೀಲಿಂಗ್ ಫ್ಯಾನ್ಗೆ ನೇಣುಬಿಗಿದುಕೊಂಡ ರೀತಿಯಲ್ಲಿ ರೇಖಾ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಸಾವಿನ ಹಿಂದೆ ಅಳಿಯ ಸಂತೋಷ್ ಕೈವಾಡವಿದೆ. ರೇಖಾಳನ್ನು ಸಾಯಿಸಿ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ನೇಣುಬಿಗಿದುಕೊಂಡಿರುವ ಹಾಗೆ ಬಿಂಬಿಸಿದ್ದಾನೆ. ಹೀಗಾಗಿ ಕೊಲೆ ಮಾಡಿದ ಸಂತೋಷ್ನನ್ನು ಬಂಧಿಸಬೇಕು ಎಂದು ಮೃತಳ ಪೋಷಕರು ದೂರು ನೀಡಿದ್ದಾರೆ. ಸದ್ಯ ಸಂತೋಷ್ನನ್ನು ವಶಕ್ಕೆ ಪಡೆದು ಯಲಹಂಕ ಉಪವಿಭಾಗದ ಎಸಿಪಿ ತನಿಖೆ ಕೈಗೊಂಡಿದ್ದಾರೆ.
ಇತ್ತೀಚಿನ ಪ್ರಕರಣ: ತಾಯಿ- ಮಕ್ಕಳಿಬ್ಬರು ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ಇತ್ತೀಚೆಗೆ ಚಾಮರಾಜಗನರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿತ್ತು. 24 ವರ್ಷದ ಮೇಘಾ ಹಾಗೂ ಆರು ವರ್ಷ ಹಾಗೂ ಮೂರು ವರ್ಷದ ಇಬ್ಬರು ಹೆಣ್ಣು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿದ್ದರು.
ಅಭಿ ಅಲಿಯಾಸ್ ಧನಂಜಯ್ ಅವರನ್ನು ಮೇಘಾ ಮದುವೆಯಾಗಿದ್ದರು. ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು. ಅತ್ತೆ, ಮಾವ ಗಂಡ ಸೇರಿ ತಮ್ಮ ಮಗಳು ಹಾಗೂ ಇಬ್ಬರು ಪುಟ್ಟ ಮಕ್ಕಳ ಕೊಲೆ ಮಾಡಿದ್ದಾರೆ ಎಂದು ಮೇಘಾ ಪೋಷಕರು ಆರೋಪಿಸಿದ್ದರು. ಪ್ರಕರಣ ಸಂಬಂಧ ಪೊಲೀಸರು ಮೇಘಾ ಅವರ ಪತಿ ಹಾಗೂ ಅತ್ತೆ- ಮಾವನನ್ನು ಬಂಧಿಸಿದ್ದರು.
ಇದನ್ನೂ ಓದಿ : ಇವಿಎಂ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ