ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಲಿವಿಂಗ್ ಟುಗೆದರ್‌ನಲ್ಲಿ ಇದ್ದ ಮಹಿಳೆ, ತನ್ನ ಪ್ರಿಯಕರನ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಕೇರಳ ಮೂಲದ ಜಾವೇದ್ (29) ಮೃತ ವ್ಯಕ್ತಿ. ಈತನ ಹತ್ಯೆ ಮಾಡಿದ ರೇಣುಕಾ (34) ಎಂಬಾಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ಕಣ್ಣೂರಿನ ಜಾವೇದ್, ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ರೇಣುಕಾ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಈ ಇಬ್ಬರಿಗೂ ಮೂರೂವರೆ ವರ್ಷದಿಂದ ಪರಿಚಯವಿದ್ದು, ಲಿವಿಂಗ್ ಟುಗೆದರ್‌ನಲ್ಲಿ ನೆಲೆಸಿದ್ದರು. ರೇಣುಕಾಗೆ 8 ವರ್ಷದ ಹೆಣ್ಣು ಮಗುವಿದೆ.
ಹುಳಿಮಾವು ಸಮೀಪದ ಅಕ್ಷಯನಗರದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿನ 2ನೇ ಮಹಡಿಯಲ್ಲಿ ಸೆಪ್ಟೆಂಬರ್ 2ರಂದು 3 ದಿನಗಳಿಗೆ ರಿಯಾಜ್ ಎಂಬಾತನ ಹೆಸರಿನಲ್ಲಿ ಪ್ಲ್ಯಾಟ್ ಬುಕ್ ಮಾಡಿದ್ದರು. ಆದರೆ, ಪ್ಲ್ಯಾಟ್‌ನಲ್ಲಿ ಜಾವೇದ್ ಮತ್ತು ರೇಣುಕಾ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ 3.15ರಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ.
ಆಗ, ಅಪಾರ್ಟ್‌ಮೆಂಟ್ ಮ್ಯಾನೇಜರ್ ಸುನೀಲ್, ಪ್ಲ್ಯಾಟ್‌ಗೆ ಹೋಗಿ ನೋಡಿದಾಗ ರೇಣುಕಾ, ತನ್ನ ತೊಡೆಯ ಮೇಲೆ ಜಾವೇದ್‌ನನ್ನು ಮಲಗಿಸಿಕೊಂಡಿದ್ದಳು. ಅದನ್ನು ನೋಡಿದ ಸುನೀಲ್, ಏನಾಯಿತು ಎಂದು ಪ್ರಶ್ನಿಸಿದಾಗ ವೈಯಕ್ತಿಕ ಸಮಸ್ಯೆ ಎಂದು ರೇಣುಕಾ ಹೇಳಿದ್ದಾಳೆ. ಕೂಡಲೇ ಸುನೀಲ್ ಮತ್ತು ಅಕ್ಕಪಕ್ಕದವರು ಆಟೋ ಮಾಡಿ ಜಾವೇದ್ ಮತ್ತು ರೇಣುಕಾಳನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಜಾವೇದ್ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ಪ್ಲ್ಯಾಟ್ ಮಾಲೀಕ ಗಣೇಶ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮುಂಡಗೋಡದಲ್ಲಿ ಇಬ್ಬರು ಟಿಬೆಟಿಯನ್ ವ್ಯಕ್ತಿಗಳ ನಡುವೆ ಮಾರಾಮಾರಿ: ಓರ್ವ ಸಾವು, ಮಾಜಿ ಸೈನಿಕನಿಗೆ ಗಂಭೀರ ಗಾಯ