ಬೆಂಗಳೂರು: ಇಂದು ಸಂಜೆ ಗೃಹ ಇಲಾಖೆ ವತಿಯಿಂದ ಹೊಸವರ್ಷಾಚರಣೆಯ ಸಂಪೂರ್ಣ ಮಾರ್ಗಸೂಚಿಯನ್ನು ಹೊರಡಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದರು.
ಗೃಹ ಸಚಿವ ಬೊಮ್ಮಾಯಿ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.30 ಮತ್ತು 31ರಂದು ಹೊಸವರ್ಷವನ್ನು ಸರಳವಾಗಿ, ಅರ್ಥಗರ್ಭಿತವಾಗಿ ಆಚರಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಹೊಸವರ್ಷ ಆಚರಣೆ ಸಂಬಂಧ ವಿಸ್ತೃತ ಮಾರ್ಗಸೂಚಿ ಹೊರಡಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಗೃಹ ಇಲಾಖೆಯಿಂದ ಸಂಜೆ ಸಂಪೂರ್ಣ ಮಾರ್ಗಸೂಚಿ ಬಿಡುಗಡೆ ಆಗಲಿದೆ. ಬೆಂಗಳೂರು ಮತ್ತು ಬೇರೆ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ ಎಂದು ವಿವರಿಸಿದರು.
ಇನ್ನು ಯುಕೆಯಿಂದ ಬಂದವರನ್ನು ಎರಡು ದಿನಗಳೊಳಗೆ ಪತ್ತೆ ಹಚ್ಚಲಾಗುತ್ತದೆ. ಈ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಯುಕೆಯಿಂದ ಬಂದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು.