ಬೆಂಗಳೂರು: ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಯೂಟೂಬ್ನಲ್ಲಿ ಕಣ್ಣೀರಿಟ್ಟು ವಿಡಿಯೋ ಮಾಡಿ 24 ಗಂಟೆಯ ಒಳಗಡೆ ಬೆಂಗಳೂರಿಗೆ ಬರ್ತೀನಿ ಎಂದು ಹೇಳಿದ್ದ. ಆದರೆ 48 ಗಂಟೆ ಕಳೆದರೂ ಇನ್ನೂ ಪೊಲೀಸರ ಎದುರು ಹಾಜರಾಗಿಲ್ಲ.
ಐಎಂಎ ಗ್ರೂಪ್ ಎಂಬ ಯೂಟೂಬ್ ಚಾನೆಲ್ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿರುವ ಮನ್ಸೂರ್ ಖಾನ್, ಹೂಡಿಕೆದಾರರ ಹಣ ವಾಪಸ್ ಕೊಡ್ತೀನಿ. ನನಗೆ ಮೋಸ ಮಾಡಿದವರ ಹೆಸರು ಹೇಳ್ತೀನಿ. ನಾನು ಬಂದಾಗ ಪೊಲೀಸರು ರಕ್ಷಣೆ ಕೊಡಿ ಎಂದು ಬೇಡಿಕೊಂಡಿದ್ದ.
ಆದರೆ ಮನ್ಸೂರ್ ಮಾತನ್ನ ಎಸ್ಐಟಿ ಅಧಿಕಾರಿಗಳು ನಂಬಿರಲಿಲ್ಲ. ಮನ್ಸೂರ್ ನಾಟಕವಾಡುತ್ತಿದ್ದಾನೆ ಎಂಬುದು ಅಧಿಕಾರಿಗಳಿಗೆ ಗೊತ್ತಿತ್ತು. ಈಗಾಗಲೇ ಈತನ ಮೇಲೆ ರೆಡ್ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದೆ. ಮನ್ಸೂರ್ ಪಾಸ್ಪೋರ್ಟ್ ಕೂಡ ಸೀಜ್ ಆಗಿದ್ದು, ಮನ್ಸೂರ್ ಬೆಂಗಳೂರಿಗೆ ಬರಬೇಕಾದರೆ ಎಸ್ಐಟಿ ಸಹಾಯ ಅವಶ್ಯವಿದೆ. ಈ ಎಲ್ಲಾ ವಿಷಯಗಳು ಗೊತ್ತಿದ್ರು ಹೂಡಿಕೆದಾರರನ್ನ ನಂಬಿಸುವ ನಾಟಕ ಆಡ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.