ಬೆಂಗಳೂರು: ಎಂ.ಪಿ.ಕುಮಾರಸ್ವಾಮಿಗೆ ನಾವೇನು ಕಡಿಮೆ ಮಾಡಿದ್ದೇವೆ?, ಎಲ್ಲವನ್ನೂ ಕೊಟ್ಟರೂ ರಾಜೀನಾಮೆ ಹೇಳಿಕೆ ನೀಡಿದ್ದಾರೆ. ಲಕ್ಷ್ಮಣ ಸವದಿ ಜೊತೆಗೂ ಮಾತನಾಡುವೆ. ಒಂದೆರಡು ಕಡೆ ಬಿಟ್ಟು, ಉಳಿದೆಡೆ ಸಮಸ್ಯೆ ಪರಿಹಾರವಾಗಲಿದೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅಧಿಕೃತ ನಿವಾಸ ಕಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕ್ಷೇತ್ರ ಬಿಟ್ಟು ಉಳಿದೆಡೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಮೂರು-ನಾಲ್ಕು ಕಡೆ ಅಸಮಾಧಾನವಿದೆ. ಇತರ ಕ್ಷೇತ್ರಗಳ ಆಕಾಂಕ್ಷಿಗಳ ಜೊತೆ ನಾನು ಮಾತನಾಡಿ ಅಸಮಾಧಾನಿತರ ಮನವೊಲಿಸಿ ಎಲ್ಲವನ್ನೂ ಸರಿಪಡಿಸುತ್ತೇನೆ. ಪಕ್ಷದಲ್ಲಿ ಗೊಂದಲ ಉಂಟುಮಾಡಬೇಡಿ ಎಂದು ವಿನಂತಿಸುತ್ತೇವೆ ಎಂದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾವು ಅವರಿಗೆ ಏನು ಕಮ್ಮಿ ಮಾಡಿದ್ದೇವೆ?. ಎಲ್ಲವನ್ನೂ ಕೊಡಲಾಗಿದೆ. ಆದರೂ ಇಂತಹ ಹೇಳಿಕೆ ನೀಡಿದ್ದಾರೆ. ರಾಜೀನಾಮೆ ಕೊಡುವುದು ಬಹಳ ಸುಲಭ. ಹೀಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದರು.
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ವಿಚಾರ ನನಗೆ ಗೊತ್ತಿದೆ. ಅವರ ಜೊತೆಗೂ ಮಾತುಕತೆ ನಡೆಸುತ್ತಿದ್ದೇನೆ ಎಂದರು. ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿಯೂ, ಈಶ್ವರಪ್ಪ ಪುತ್ರ ಕಾಂತೇಶ್ ಜೊತೆ ಮಾತುಕತೆ ನಡೆಸಲಾಗಿದೆ. ಎಲ್ಲವೂ ಸರಿಯಾಗಲಿದೆ. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಎಂ.ಪಿ.ಕುಮಾರಸ್ವಾಮಿ ಅವರ ಮನವೊಲಿಕೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಅಸಮಾಧಾನ ಇರುವುದು ನಿಜ, ಅವರಂತೆ ಇನ್ನೂ ಕೆಲವರಿಗೆ ಬೇಸರವಿದೆ. ಎಲ್ಲರೊಂದಿಗೂ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ಎರಡು ಪಟ್ಟಿ ಬಿಡುಗಡೆಯಾಗಿದೆ. ಇನ್ನೆರಡು ದಿನಗಳಲ್ಲಿ ಬಾಕಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ. ಮೂರನೇ ಪಟ್ಟಿಯಲ್ಲೂ ಅಚ್ಚರಿಗಳಿವೆ ಎಂದ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೈಕಮಾಂಡ್ ಆಹ್ವಾನದ ಮೇರೆಗೆ ದೆಹಲಿ ತೆರಳಿದ್ದರು. ವರಿಷ್ಠರು ಅವರ ಜೊತೆ ಮಾತನಾಡುತ್ತಾರೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಂದು ಸ್ಪರ್ಧಿಸಲಿ ಎಂಬ ಕಾಂಗ್ರೆಸ್ ಸವಾಲು ವಿಚಾರಕ್ಕೆ ತಿರುಗೇಟು ನೀಡಿದ ಕಟೀಲ್, ಖರ್ಗೆಯವರು ಬಂದು ಇಲ್ಲಿ ಸ್ಪರ್ಧಿಸಲಿ ನೋಡೋಣ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರನ್ನು ಕರೆತಂದು ಇಲ್ಲಿ ನಿಲ್ಲಿಸಲಿ, ನಿಲ್ಲಿಸ್ತಾರಾ? ಕಾಂಗ್ರೆಸ್ನಲ್ಲಿ ಸಿಎಂ ಕಚ್ಚಾಟವೇ ಮುಗೀತಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ನೀಡಿಲ್ಲ: ಬಿ ವೈ ವಿಜಯೇಂದ್ರ