ಬೆಂಗಳೂರು : ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದ್ದರೂ ಅಖಾಡಕ್ಕಿಳಿದಿರುವ ಜೆಡಿಎಸ್, ಉಪಚುನಾವಣೆಯಲ್ಲಿ ‘ಕಿಂಗ್ ಮೇಕರ್’ ಆಗುವುದೇ ಎಂಬ ಪ್ರಶ್ನೆ ಎದುರಾಗಿದೆ.
ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣತೊಟ್ಟಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ತಮ್ಮ ಅಸ್ತಿತ್ವ ಸಾಬೀತು ಪಡಿಸಲೇಬೇಕೆಂದು ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಉಪ ಕದನಕ್ಕೆ ರೆಡಿಯಾಯ್ತಾ ಗೇಮ್ ಪ್ಲ್ಯಾನ್?
ಉಪ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಸಿಗುವಂತೆ ಮಾಡುವುದೇ ಜೆಡಿಎಸ್ ಕಾರ್ಯತಂತ್ರವಾಗಿದ್ದು, ಚುನಾವಣಾ ಫಲಿತಾಂಶದ ಬಳಿಕ ನಡೆಯುವ ವಿದ್ಯಮಾನಗಳಲ್ಲಿ ಕಿಂಗ್ ಮೇಕರ್ ಆಗಲು ತೆನೆ ಪಡೆ ಹೊಸ ತಂತ್ರ ಹೆಣೆಯಲು ಮುಂದಾಗಿದೆ. ಅದೇ ಕಾರಣಕ್ಕೆ ರಾಜ್ಯದ ಗಮನ ಸೆಳೆಯುತ್ತಿರುವ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರಿಗೆ ಬೆಂಬಲ ಘೋಷಿಸಿರುವ ಜೆಡಿಎಸ್, ಚುನಾವಣಾ ತಂತ್ರ ರೂಪಿಸಿದೆ.
ಶಿವಾಜಿನಗರ ಕ್ಷೇತ್ರದಿಂದ ರೋಷನ್ ಬೇಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ್ದು, ಒಂದು ವೇಳೆ ಅವರು, ಪಕ್ಷೇತರರಾಗಿ ಸ್ಪರ್ಧೆ ಮಾಡಿದರೆ ತಮ್ಮ ಅಭ್ಯರ್ಥಿಯನ್ನು ತಟಸ್ಥಗೊಳಿಸಿ ರೋಷನ್ ಬೇಗ್ ಅವರಿಗೆ ಬೆಂಬಲ ನೀಡುವ ಚಿಂತನೆ ಜೆಡಿಎಸ್ ಪಾಳಯದಲ್ಲಿ ನಡೆದಿದೆ. ಆದರೆ, ಐಎಂಎ ಪ್ರಕರಣದಲ್ಲಿ ಬೇಗ್ ಅವರ ಹೆಸರು ತಳಕು ಹಾಕಿಕೊಂಡಿರುವ ಹಿನ್ನೆಲೆ ಜೆಡಿಎಸ್ ವರಿಷ್ಠರು ಬೆಂಬಲ ನೀಡಬೇಕೇ ಅಥವಾ ಬೇಡವೇ ಎಂಬ ಲೆಕ್ಕಾಚಾರದಲ್ಲೂ ತೊಡಗಿದ್ದಾರೆ ಎನ್ನಲಾಗಿದೆ.
ಬಿಜೆಪಿ ಸರ್ಕಾರ ಉಳಿಯಬೇಕಾದರೆ 8 ಕ್ಷೇತ್ರಗಳು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಇದಕ್ಕಿಂತ ಸಂಖ್ಯೆ ಕಡಿಮೆಯಾದರೆ ಮತ್ತೆ ಬಿಜೆಪಿಗೆ ಸಂಕಷ್ಟ ಎದುರಾಗುತ್ತದೆ. ಹಾಗಾಗಿ, ಬಿಜೆಪಿಗೆ ಮೂರು ವರ್ಷ ಸರ್ಕಾರ ಮುನ್ನಡೆಸಲು ಜೆಡಿಎಸ್ನ ಅನಿವಾರ್ಯತೆ ಉಂಟಾದರೂ ಆಗಬಹುದು. ಆಗ ತನ್ನದೇ ಆದ ಆಟ ಪ್ರಾರಂಭಿಸಲು ಜೆಡಿಎಸ್ ಹೊಸ ಲೆಕ್ಕಾಚಾರ ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.
ಕೇವಲ ಹೊಸಕೋಟೆ ಕ್ಷೇತ್ರ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲೂ ಜೆಡಿಎಸ್ ತನ್ನದೇ ಆದ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಸ ಗೇಮ್ ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೆ.ಆರ್.ಪೇಟೆ, ಹುಣಸೂರು, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಹೆಚ್ಚು ಶ್ರಮ ಹಾಕಿ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಒಂದೆರಡು ಕ್ಷೇತ್ರಗಳನ್ನು ತಮ್ಮತ್ತ ಸೆಳೆದುಕೊಳ್ಳುವುದು ವರಿಷ್ಠರ ಲೆಕ್ಕಾಚಾರ. ಹಾಗಾಗಿ, ವರಿಷ್ಠರು ಸೇರಿದಂತೆ ಬಹುತೇಕ ನಾಯಕರು ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಜೆಡಿಎಸ್ಗೆ ಆತಂಕ : ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದು, ಸರ್ಕಾರ ಗಟ್ಟಿಗೊಂಡರೆ ಮತ್ತೆ ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸಬಹುದು ಎಂಬ ಆತಂಕ ಸಹ ಇದೆ. ಮಾಜಿ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಕೆಲ ಮುಖಂಡರು ಈಗಾಗಲೇ ಬಿಜೆಪಿ ಸಂಪರ್ಕದಲ್ಲಿರುವ ಮಾಹಿತಿ ವರಿಷ್ಠರಿಗೆ ಇದೆ. ಇನ್ನು ಕೆಲ ನಾಯಕರು ಕಾಂಗ್ರೆಸ್ ಸಂಪಕರ್ದಲ್ಲಿರುವ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ಹೇಗಾದರೂ ಮಾಡಿ ಇದನ್ನು ತಡೆದು ಪಕ್ಷದಿಂದ ಯಾರೂ ಹೋಗದಂತೆ ಮಾಡಲು ಹೊಸ ತಂತ್ರಗಳನ್ನು ಹೆಣೆಯಲಾಗುತ್ತಿದೆ ಎಂದು ತಿಳಿದು ಬಂದಿದೆ.