ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಉಚಿತ ವ್ಯಾಕ್ಸಿನೇಷನ್ ಶಿಬಿರಕ್ಕೆ ಆರೋಗ್ಯ ಸಚಿವ ಸುಧಾಕರ್, ವಾರ್ತಾ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಚಾಲನೆ ನೀಡಿದರು.
ಕೆಲವು ದಿನಗಳ ಹಿಂದೆ ಕನ್ನಡ ಚಿತ್ರರಂಗದ ಕಲಾವಿದರಿಗೆ ಹಾಗೂ ಸದಸ್ಯರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಶಿಬಿರವನ್ನ ಹಿರಿಯ ನಟ ದೊಡ್ಡಣ್ಣ, ನಟಿ, ನಿರ್ದೇಶಕಿ ರೂಪ ಐಯ್ಯರ್ ನೇತೃತ್ವದಲ್ಲಿ ಮಾಡಲಾಗಿತ್ತು. ಈಗ ನಿರ್ದೇಶಕಿ ರೂಪ ಐಯ್ಯರ್ ನೇತೃತ್ವದಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಉಚಿತ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅರಣ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ತಾರಾ ಅನುರಾಧಾ, ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕ ನಾಗಣ್ಣ ಸೇರಿದಂತೆ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಉಪಸ್ಥಿತಿ ಇದ್ದರು.
ಫಿಲ್ಮ್ ಚೇಂಬರ್ ಸದಸ್ಯರು, ವಿತರಕರು, ನಿರ್ಮಾಪಕರು ಮತ್ತು ಸಿಬ್ಬಂದಿಗೆ ಹಾಗೂ ಕುಟುಂಬದವರಿಗೆ ಎರಡು ದಿನಗಳ ಕಾಲ ಲಸಿಕೆ ನೀಡುವ ಶಿಬಿರ ಮಾಡಲಾಗುತ್ತಿದೆ.
ಲಸಿಕೆ ನೀಡುವ ಶಿಬಿರಕ್ಕೆ ಚಾಲನೆ ಕೊಟ್ಟು ಮಾತನಾಡಿದ ಆರೋಗ್ಯ ಸಚಿವ, ಡಾ. ಕೆ.ಸುಧಾಕರ್, ಕೊರೊನಾದಿಂದ ಎಲ್ಲಾ ವಯಲಗಳಿಗೆ ನಷ್ಟ ಆಗಿದೆ. ಅದರಲ್ಲಿ ಚಿತ್ರರಂಗ ಕ್ಷೇತ್ರಕ್ಕೆ ಹೆಚ್ಚಿನ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಹೀಗಾಗಿ ಇದನ್ನು ಸರಿಪಡಿಸಲು ಎಲ್ಲರೂ ಲಸಿಕೆ ಪಡೆಯಬೇಕು. ಮುಖ್ಯವಾಗಿ ಸಿನಿಮಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನಟರು, ನಿರ್ಮಾಪಕರು ಸೇರಿದಂತೆ ಎಲ್ಲರನ್ನು ಮುಂಚೂಣಿಯಲ್ಲಿ ಸೇರಿಸಲಾಗಿದೆ. ಕೊರೊನಾದಿಂದ ದೂರ ಇರಬೇಕು ಅಂದರೆ ಎಲ್ಲರೂ ಲಸಿಕೆ ಪಡೆಯಬೇಕು. ನನಗೆ ವಿಶ್ವಾಸ ಇದೆ. ಈ ವರ್ಷದ ಅಂತ್ಯದೊಳಗೆ ಇಡೀ ಕರ್ನಾಟಕ ರಾಜ್ಯದ ಎಲ್ಲರಿಗೂ ಎರಡು ಡೋಸ್ ಲಸಿಕೆ ನೀಡುತ್ತೇವೆ. ಈ ತಿಂಗಳ ಕೊನೆಯಲ್ಲಿ 80 ಲಕ್ಷದ ಜನರಿಗೆ ಲಸಿಕೆ ಬರುತ್ತೆ. ಇಲ್ಲಿವರೆಗೂ ಒಂದು ಕೋಟಿ 55 ಲಕ್ಷ ಜನರಿಗೆ ಲಸಿಕೆ ನೀಡಿದ್ದೇವೆ. ಒಟ್ಟಾರೆಯಾಗಿ 10 ಕೋಟಿ ಲಸಿಕೆ ನೀಡಬೇಕಿದೆ ಎಂದ್ರು.
ಜುಲೈನಿಂದ ಒಂದೂವರೆ ಕೋಟಿ ಲಸಿಕೆ ಬರುವ ನಿರೀಕ್ಷೆ ಇದೆ. ಅಕ್ಟೋಬರ್ನಿಂದ ಡಿಸೆಂಬರ್ ಒಳಗೆ ಎಲ್ಲರಿಗೂ 2 ಡೋಸ್ ನೀಡಲು ಗುರಿ ಹೊಂದಿದ್ದೇವೆ. ಪ್ರಧಾನಮಂತ್ರಿಗಳು ಉಚಿತವಾಗಿ ಲಸಿಕೆ ನೀಡಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವೇ ಲಸಿಕೆ ಖರೀದಿ ಮಾಡಿ ನಮಗೆ ಕೊಡುತ್ತೆ. ಚಲನಚಿತ್ರ ಕ್ಷೇತ್ರ ಜನರಿಗೆ ಮಾಹಿತಿ ಕೊಡುವ ವಲಯ ಆಗಿದ್ದು, ಬಿಬಿಎಂಪಿ ಆದಷ್ಟು ಬೇಗ ಈ ಕ್ಷೇತ್ರಕ್ಕೆ ಲಸಿಕೆ ಕೊಡಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.