ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಪ್ರಾಧಿಕಾರ(ಬಿಐಎಎಲ್) ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ)ಯಡಿ ಸಾರ್ವಜನಿಕ ಪ್ರಾಧಿಕಾರ ಹೌದೇ, ಅಲ್ಲವೇ ಎಂದು ಮತ್ತೊಮ್ಮೆ ತೀರ್ಮಾನ ಕೈಗೊಳ್ಳುವಂತೆ ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ವಿಮಾನ ನಿಲ್ದಾಣವನ್ನು ಸಾರ್ವಜನಿಕ ಪ್ರಾಧಿಕಾರವೆಂದು ಮಾಹಿತಿ ಹಕ್ಕು ಆಯೋಗ ನೀಡಿದ್ದ ಆದೇಶ ಎತ್ತಿಹಿಡಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಐಎಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಮಾನ್ಯ ಮಾಡಿ ಆದೇಶ ಹೊರಡಿಸಿತು.
ಬಿಐಎಎಲ್ ಕಂಪನಿ ಕಾಯಿದೆ 1952 ರ ಅಡಿಯಲ್ಲಿ ಸ್ಥಾಪನೆಯಾಗಿರುವ ಕಂಪನಿಯಾಗಿದ್ದು, ಅದರ ಉದ್ದೇಶ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದಾಗಿದೆ. ಅದಕ್ಕಾಗಿ ನಾಲ್ವರು ಪಾಲುದಾರರಾದ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಸಿಮನ್ಸ್ ಪ್ರಾಜೆಕ್ಟ್ ವೆಂಚರ್ಸ್, ಫ್ಲುಗಪೆನ್ ಜುರಿಚ್ ಎಜಿ, ಲಾರ್ಸೆನ್ ಅಂಡ್ ಟುಬ್ರೋ ಮತ್ತು ಬಿಐಎಎಲ್ ನಡುವೆ ಒಪ್ಪಂದ ಏರ್ಪಟ್ಟಿತ್ತು.
ಕಂಪನಿ ಬಗ್ಗೆ ಮಾಹಿತಿ ನೀಡುವಂತೆ ಬೆನ್ಸನ್ ಐಸಾಕ್ ಎಂಬುವರು ಆರ್‌ಟಿಐ ಕಾಯಿದೆ ಸೆಕ್ಷನ್ 4(1)(ಬಿ) ಅಡಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಕಾರಣ ಅವರು ಆರ್‌ಟಿಐ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಪೂರ್ಣಪೀಠ, ಬಿಐಎಎಲ್ ಸಾರ್ವಜನಿಕ ಪ್ರಕಾರದ ವ್ಯಾಪ್ತಿಗೆ ಒಳಪಡಲಿದೆ ಎಂದು ಆದೇಶ ನೀಡಿತ್ತು. ಅದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯಪೀಠ 2010ರಲ್ಲಿ ಮಾನ್ಯ ಮಾಡಿ, ಆರ್‌ಟಿಐ ಆಯೋಗದ ಆದೇಶವನ್ನು ಊರ್ಜಿತಗೊಳಿಸಿತ್ತು.
ಇದನ್ನೂ ಓದಿ: ಮತದಾರರ ಮಾಹಿತಿ ದುರುಪಯೋಗ: ಜಿಲ್ಲಾಧಿಕಾರಿ ಅರ್ಜಿ ವಿಚಾರಣೆ ಮುಂದೂಡಿಕೆ