ಬೆಂಗಳೂರು: ರಾಜ್ಯದ ವಕೀಲರ ಶ್ರೇಯೋಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ವಕೀಲರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಕೀಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ವಕೀಲರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಆದ್ಯತೆ ನೀಡಲಿದೆ. ವಕೀಲರ ಶ್ರೇಯೋಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ 13 ಕೌಟುಂಬಿಕ ಮತ್ತು 31 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲು ಸರ್ಕಾರ ಅನುಮೋದನೆ ನೀಡಿದ್ದು, ನ್ಯಾಯಾಂಗ ವ್ಯವಸ್ಥೆ ಬಲಪಡಿಸಲು ಸರ್ಕಾರ ಒತ್ತು ನೀಡಿದೆ ಎಂದು ತಿಳಿಸಿದರು.
ನ್ಯಾಯದಾನ ವ್ಯವಸ್ಥೆಯಲ್ಲಿ ವಕೀಲರ ವೃತ್ತಿ ಅತ್ಯಂತ ಪ್ರಮುಖವಾದದ್ದು. ದೇಶದ ಸಂವಿಧಾನದಲ್ಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡುವಂತೆ ಮಾಡುವ ಮಹತ್ವದ ಜವಾಬ್ದಾರಿ ವಕೀಲರ ಮೇಲೆ ಇದೆ. ದೇಶದ ಸಂವಿಧಾನವನ್ನು ಉಳಿಸಿ, ಬೆಳೆಸಲು ವಕೀಲರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಭಾವಂತ ಯುವ ಸಮೂಹ ವಕೀಲ ವೃತ್ತಿಯತ್ತ ಆಸಕ್ತರಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದರು.
ರಾಜ್ಯದಲ್ಲಿ 1.10 ಲಕ್ಷ ವಕೀಲರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಕಷ್ಟ - ಕಾರ್ಪಣ್ಯ ನಿವಾರಿಸಲು ವಕೀಲರ ಪಾತ್ರ ಅನನ್ಯ. ಜನ ಸಾಮಾನ್ಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ, ಕರ್ತವ್ಯಗಳನ್ನು ತಿಳಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ವಕೀಲರು ಭೂ ವ್ಯಾಜ್ಯ, ಅಪಘಾತ, ಕಾರ್ಮಿಕ ಸಮಸ್ಯೆಗಳ ವಿಚಾರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಲಿಷ್ಠ, ನಿರ್ಭೀತ, ಜಾತಿ ರಹಿತ, ವೈವಿದ್ಯತೆಯ ಏಕತೆಯನ್ನು ಸಾರುವ ಸಮಾಜ ನಿರ್ಮಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ : 6 ದಿನ ಅವಕಾಶ ನೀಡಿದ್ರೇ ನಾನು ಇಡೀ ಶಿಕ್ಷಣ ವ್ಯವಸ್ಥೆ ಬದಲಿಸಿ ತೋರಿಸುವೆ : ಸರ್ಕಾರಕ್ಕೆ ಹೊರಟ್ಟಿ ಸವಾಲು
ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ವಕೀಲ ಸಮೂಹ ಜನ ಸಾಮಾನ್ಯರ ಬದುಕು ಹಸನುಗೊಳಿಸುವ ಕೆಲಸ ಮಾಡಬೇಕಾಗಿದೆ. ವಕೀಲರ ವೃತ್ತಿ ಸವಾಲಿನದ್ದು, ವಕೀಲರು ಬಡವರು, ನ್ಯಾಯದ ಪರವಾಗಿ ಇರಬೇಕು. ನಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಬೇಕು ಎಂದರು.
ಪ್ರತ್ಯೇಕ ಲಾ ಸ್ಕೂಲ್ ತೆರೆಯಬೇಕು:
ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಶೇ. 25 ರಷ್ಟು ಮೀಸಲಾತಿ ಘೋಷಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು. ಲಾ ಸ್ಕೂಲ್ಗೆ ಮೀಸಲಾತಿ ನೀಡದಿದ್ದರೆ ವಕೀಲರ ಪರಿಷತ್ತಿನ ಸಹಯೋಗದಲ್ಲಿ ಪ್ರತ್ಯೇಕ ಕಾನೂನು ಶಾಲೆ ತೆರೆಯಬೇಕು ಎಂದು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ.ಅನಿಲ್ ಕುಮಾರ್ ಮನವಿ ಮಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಹೆಚ್ಚಿನದಾಗಿತ್ತು. ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸುವಲ್ಲಿಯೂ ಸಹ ವಕೀಲರೇ ನಿರ್ಣಾಯಕ ಪಾತ್ರ ವಹಿಸಿದ್ದರು. ವಕೀಲರಿಗೆ ಅಗತ್ಯವಿರುವ ಗುಣಮಟ್ಟದ ಕಾನೂನು ಶಿಕ್ಷಣ ದೊರೆಯುತ್ತಿದೆ. ವಕೀಲರ ತರಬೇತಿಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕು. ವಕೀಲರ ಕಲ್ಯಾಣ ನಿಧಿಗೆ ಬಜೆಟ್ನಲ್ಲಿ ಹಣ ಮೀಸಲಿಡಬೇಕು. ವಕೀಲರಿಗೆ ಶಾಶ್ವತ ಕಟ್ಟಡ ನೀಡಬೇಕು ಎಂದು ಮನವಿ ಮಾಡಿದರು.