ಬೆಂಗಳೂರು : ಪತಿಯನ್ನು ಹತ್ಯೆ ಮಾಡಿ ಬಳಿಕ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲು ಪ್ರಯತ್ನಿಸಿದ್ದ ಅಣ್ಣ-ತಂಗಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಖಾಯಂಗೊಳಿಸಿ ಆದೇಶಿಸಿದೆ.
ಪತಿ ನಾಗಮಹದೇವನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ನಗರದ 52ನೇ ಸಿಸಿಎಚ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದಪಡಿಸುವಂತೆ ಕೋರಿ ಮಾಲತಿ ಹಾಗೂ ಆಕೆಯ ಅಣ್ಣ ಗಿರೀಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಆರೋಪಿಗಳ ಮನವಿಯನ್ನು ವಜಾಗೊಳಿಸಿದೆ. ಅಲ್ಲದೇ, ತಂಗಿಗೆ ವಿಧಿಸಿದ್ದ ಶಿಕ್ಷೆಯನ್ನು ಖಾಯಂಗೊಳಿಸಿರುವ ಪೀಠ, 1 ಲಕ್ಷ ದಂಡವನ್ನು ವಿಧಿಸಿದೆ.
ಇದೇ ವೇಳೆ ಕೊಲೆಗೆ ಸಹಕಾರ ನೀಡಿದ ಆರೋಪದಡಿ ಮಾಲತಿ ಅಣ್ಣ ಗಿರೀಶನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 9 ವರ್ಷಗಳಿಗೆ ಇಳಿಸಿದೆ. ಹಾಗೆಯೇ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಆರಂಭದಲ್ಲಿ ಯುಡಿಆರ್ ದಾಖಲಿಸಿ ಕೈತೊಳೆದುಕೊಂಡಿದ್ದಾರೆ. ಆರೋಪಿಗಳು ಸಾಕ್ಷ್ಯ ನಾಶಪಡಿಸಿದ್ದರೂ, ಪ್ರತ್ಯಕ್ಷದರ್ಶಿಯ ಸಾಕ್ಷ್ಯವಿರುವುದರಿಂದ ಶಿಕ್ಷೆ ವಿಧಿಸಿರುವುದು ಸರಿಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆರೋಪಿಗಳು ಘಟನೆ ನಡೆದ 51 ದಿನಗಳ ಬಳಿಕ ದೂರು ನೀಡಲಾಗಿದೆ. ಇಂತಹ ಹೇಳಿಕೆ ಆಧರಿಸಿ ಶಿಕ್ಷೆ ನೀಡಿರುವುದು ಸರಿಯಲ್ಲ. ಆದ್ದರಿಂದ ಆರೋಪಿಗಳಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ಆರೋಪಿಗಳ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಈ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ:
ಜೆಪಿ ನಗರದಲ್ಲಿ ವಾಸವಿದ್ದ ನಾಗಮಹದೇವ ಹಾಗೂ ಮಾಲತಿ ದಂಪತಿ ನಡುವೆ ಅಕ್ರಮ ಸಂಬಂಧದ ವಿಚಾರವಾಗಿ ಆಗಾಗ ಗಲಾಟೆಯಾಗುತ್ತಿತ್ತು. ಪತ್ನಿ ಮಾಲತಿಗೆ ಸರ್ವೇಶ್ ಎಂಬಾತನ ಜತೆ ಸಂಬಂಧ ಹೊಂದಿದ್ದಾಳೆ ಎಂದು ಪತಿ ಜಗಳ ತೆಗೆಯುತ್ತಿದ್ದ. ಇದೇ ವಿಚಾರವಾಗಿ 2005ರ ಮೇ 17ರಂದು ದಂಪತಿ ನಡುವೆ ಜಗಳವಾಗಿ ಮಾಲತಿ ಪತಿ ನಾಗಮಹದೇವನ ಮರ್ಮಾಂಗಕ್ಕೆ ಒದ್ದಿದ್ದಳು.
ಈ ವೇಳೆ ಪತಿ ಕುಸಿದು ಬಿದ್ದಿದ್ದ. ಗಲಾಟೆ ಕೇಳಿ ಪಕ್ಕದ ಮನೆಯಲ್ಲಿದ್ದ ಅಣ್ಣ ಗಿರೀಶ್ ಮನೆಗೆ ಬರುತ್ತಲೇ ಕುಸಿದು ಬಿದ್ದ ಪತಿಯನ್ನು ಉಸಿರುಗಟ್ಟಿಸಿ ಮಾಲತಿ ಕೊಲೆ ಮಾಡಿದ್ದಳು ಇದಕ್ಕೆ ಗಿರೀಶನೂ ಸಹಾಯ ಮಾಡಿದ್ದ. ನಾಗಮಹದೇವ ಸಾವನ್ನಪ್ಪಿದ ಬಳಿಕ ಆತನ ಮೃತ ದೇಹವನ್ನು ಫ್ಯಾನ್ಗೆ ನೇತು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದರು. ಈ ಎಲ್ಲಾ ಘಟನೆಯನ್ನು ಮನೆಯಲ್ಲಿದ್ದ ಸಂಬಂಧಿ ರಶ್ಮಿ ನೋಡಿದ್ದರೂ, ಆಕೆಗೆ ಬೆದರಿಸಿ ವಿಷಯ ಮುಚ್ಚಿಟ್ಟಿದ್ದರು.
ಅಂತ್ಯಸಂಸ್ಕಾರದ ವೇಳೆ ಮೃತನ ಸಹೋದರನಿಗೆ ಸಂಶಯ ಬಂದು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣವನ್ನು ಅಲ್ಲಿಗೇ ಕೈಬಿಟ್ಟಿದ್ದರು. ಮಾಲತಿ ಅಣ್ಣ ಗಿರೀಶ ಪೊಲೀಸ್ ಪೇದೆಯಾಗಿದ್ದರಿಂದ ಹಾಗೂ ಏನೂ ನಡೆದೇ ಇಲ್ಲ ಎಂಬಂತೆ ಅಣ್ಣ ತಂಗಿ ವರ್ತಿಸಿದ್ದರಿಂದ ಪೊಲೀಸರಿಗೂ ಅನುಮಾನ ಬಂದಿರಲಿಲ್ಲ. ಆದರೆ, ಕೊಲೆ ನಡೆದು 51 ದಿನಗಳಾದ ಬಳಿಕ ಪ್ರಕರಣದ ಪ್ರತ್ಯಕ್ಷ ಸಾಕ್ಷ್ಯಿ ರಶ್ಮಿ ಪೊಲೀಸರಿಗೆ ದೂರು ನೀಡಿ, ಘಟನೆಯನ್ನು ವಿವರಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದರು.