ಬೆಂಗಳೂರು: ಕೋಪದ ಕೈಗೆ ಬುದ್ಧಿಕೊಟ್ಟ ಪತಿಯೊಬ್ಬ ತನ್ನ ಪತ್ನಿಯನ್ನು ಡಂಬಲ್ಸ್‌ನಿಂದ (ವ್ಯಾಯಾಮಕ್ಕೆ ಬಳಸುವ ಸಾಧನ) ಹೊಡೆದು ಕೊಲೆಗೈದ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶೀಲ ಶಂಕೆ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹ ನಡೆದು ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಬಳಿಕ ಪತಿಯೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಆರೋಪಿಯು ರಾಮಮೂರ್ತಿನಗರ ಪೊಲೀಸರೆದುರು ಶರಣಾಗಿದ್ದಾನೆ. ಆರೋಪಿಯನ್ನು ಮೊರೀಸ್ ಎಂದು ಗುರುತಿಸಲಾಗಿದೆ. ಲೈದಿಯಾ (44) ಎಂಬ ಮಹಿಳೆ ಕೊಲೆಯಾಗಿದ್ದಾರೆ.
ಆರೋಪಿ ಮೋರಿಸ್ನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ರಾಮಮೂರ್ತಿನಗರದ ಹೊಯ್ಸಳ ಸ್ಟ್ರೀಟ್ನಲ್ಲಿನ ಎರಡು ಅಂತ್ತಸಿನ ಮನೆಯೊಂದರಲ್ಲಿ ವಾಸವಾಗಿರುವ ಮೋರಿಸ್, 18 ವರ್ಷಗಳ ಹಿಂದೆ ಲೈದಿಯಾಳನ್ನ ಮದುವೆ ಮಾಡಿಕೊಂಡಿದ್ದ. ದಂಪತಿಗೆ ಶಾಲೆಗೆ ಹೋಗುವ ಮೂವರು ಗಂಡು ಮಕ್ಕಳಿದ್ದಾರೆ. ಪತ್ನಿ ಗೃಹಿಣಿಯಾದರೆ ಪತಿ ಮೊಬೈಲ್ ನೆಟ್ವರ್ಕ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ದಂಪತಿಯ ಸಂಸಾರದಲ್ಲಿ ಎಲ್ಲವೂ ಅನ್ಯೋನ್ಯವಾಗಿಯೇ ಇತ್ತು. ಈ ಮಧ್ಯೆ ಪತಿ ಮೋರಿಸ್ಗೆ ಪತ್ನಿಯ ಮೇಲೆ ಅನುಮಾನ ಹುಟ್ಟಿಕೊಂಡಿರುವುದು ಅನಾಹುತಕ್ಕೆ ಕಾರಣವಾಗಿದೆ. ಪರಪುರುಷನೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಇಂದು ಬೆಳಗ್ಗೆ ಮಕ್ಕಳು ಶಾಲೆಗೆ ಹೋದ ಮೇಲೆ ಪತ್ನಿ ಜೊತೆ ಕ್ಯಾತೆ ತೆಗೆದಿದ್ದಾನೆ. ನೋಡ ನೋಡುತ್ತಿದ್ದಂತೆ ಗಲಾಟೆ ತಾರಕ್ಕಕ್ಕೇರಿದೆ. ಮನೆಯಲ್ಲಿದ್ದ ಸುಮಾರು ಎರಡೂವರೆ ಕೆ.ಜಿ ತೂಕದ ಡಂಬಲ್ಸ್‌ನಿಂದ ಐದಾರು ಬಾರಿ ಪತ್ನಿಯ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯವೆಸಗಿದ ಬಳಿಕ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮನೆಯಲ್ಲಿ ಕೌಟುಂಬಿಕ ಕಾರಣಕ್ಕಾಗಿ ಜಗಳ ನಡೆದಿದೆ ಎಂದು ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಲೈದಿಯಾಳ ಶವ ಕ್ರೂರವಾಗಿ ಹತ್ಯೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಮೋರಿಸ್ನನ್ನು ಬಂಧಿಸಲಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: ''ಬೆಳಗ್ಗೆ ಸುಮಾರು 10.30 ಸುಮಾರಿಗೆ ಹೊಯ್ಸಳ ಕಂಟ್ರೋಲ್ ರೂಮ್ಗೆ ವ್ಯಕ್ತಿಯೊಬ್ಬ ಕರೆ ಮಾಡಿ ತಮ್ಮ ಮನೆಯಲ್ಲಿ ಕೌಟುಂಬಿಕ ಕಲಹ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದ. ತಕ್ಷಣ ರಾಮಮೂರ್ತಿನಗರ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆಗ ರಕ್ತಸಿಕ್ತವಾಗಿ ಬಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳೂ ಸಹ ಸ್ಥಳಕ್ಕೆ ಹೋಗಿದ್ದಾರೆ. ಆಗ ಮನೆಯಲ್ಲಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಆತನೇ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಇವರಿಗೆ ಮೂವರು ಮಕ್ಕಳಿದ್ದು, ಅವರೆಲ್ಲ ಶಾಲೆಗೆ ಹೋದ ಸಂದರ್ಭದಲ್ಲಿ ದಂಪತಿ ನಡುವೆ ಕಲಹ ನಡೆದು, ಪತಿಯೇ ಪತ್ನಿಯನ್ನು ಡಂಬಲ್ಸ್‌ನಿಂದ ಐದಾರು ಬಾರಿ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರ ಗಾಯದಿಂದ ಮಹಿಳೆಯು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೊಲೆ ಮಾಡಿದ ಬಳಿಕ ಆರೋಪಿಯೇ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಕ್ಕಪಕ್ಕದ ಮನೆಯವರನ್ನು ವಿಚಾರಣೆ ನಡೆಸಿದಾಗಲೂ ಇಬ್ಬರ ನಡುವೆ ಕಳೆದ ಕೆಲ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎಂಬುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ'' ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಗರ್ಭಿಣಿ ಸೇರಿ ಇಬ್ಬರು ಸಾವು
ವ್ಯಕ್ತಿ ಆತ್ಮಹತ್ಯೆ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಒಕ್ಕಲಿಗರ ಬೀದಿಯ ನಿವಾಸಿ ಆನಂದ್ (38) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತ ಆನಂದ್ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಜೀವನ ನಡೆಸಲು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಶವಗಾರಕ್ಕೆ ಕಳುಹಿಸಲಾಗಿದೆ.