ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಅದ್ಯಾಕೆ ಒಡೆಯರ್ ಹೆಸರು ಬೇಸರ ತರಿಸಿತೋ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಂದು ಅಭಿನಂದನೆ ಸಲ್ಲಿಸುತ್ತೇನೆ. ಮೈಸೂರಿನಿಂದ ಬೆಂಗಳೂರಿಗೆ ಓಡಾಡುವವರ ಮನಸ್ಸಿನಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಅನ್ನೋದರ ಹೆಸರು ಬದಲಿಸಬೇಕು ಎಂಬ ಬೇಗುದಿ ಇತ್ತು. ಕರ್ನಾಟಕಕ್ಕೆ ಮೊದಲು ಮೀಸಲಾತಿ ತಂದುಕೊಟ್ಟ, ನಾಡು ಕಟ್ಟಿದ ಒಡೆಯರ್ ಹೆಸರಿಟ್ಟಿದ್ದಾರೆ ಎಂದರು.
ಒಡೆಯರ್ ಹೆಸರಿಟ್ಟಿರೋದಕ್ಕೆ ನಾಡಿನ ಎಲ್ಲರೂ ಸ್ವಾಗತ ಕೋರಿದ್ದಾರೆ. ಸಿದ್ದರಾಮಯ್ಯ ಮತ್ತೆ ಕೆಲ ಕಾಂಗ್ರೆಸ್‌ನವರು ಯಾಕೆ ವಿರೋಧ ಮಾಡ್ತಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರದಲ್ಲಿದ್ದು, ಮೀಸಲಾತಿ ಹೆಚ್ಚಳ ಕೆಲಸ ಮಾಡಲೇ ಇಲ್ಲ. ಬಿಜೆಪಿ ಸರ್ಕಾರ ತನ್ನ ಬದ್ಧತೆ ತೋರಿಸಿದೆ. 1947 ರಿಂದ ಮೊನ್ನೆಯವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಕೊಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಮೀಸಲಾತಿ ಚುನಾವಣಾ ಲಾಭದ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಹೋರಾಟದ ಬೇಡಿಕೆಯನ್ನು ಬಿಜೆಪಿ ಈಡೇರಿಸಿದೆ. ಹಾಗಾಗಿ ಈಗ ಜನ ತೀರ್ಮಾನ ಮಾಡಬೇಕು. ಕಾಂಗ್ರೆಸ್ನದ್ದು ಸಮಿತಿ ಮಾಡಿದ್ದೇವೆ, ನೋಡೋಣ ಎಂಬ ಕಣ್ಣೊರೆಸುವ ತಂತ್ರ ಎಂದರು.
ಇದನ್ನೂ ಓದಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ: ತಕ್ಷಣ ಆದೇಶ ಹೊರಡಿಸಲು ನಿರ್ಧಾರ