ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳ ಜತೆಗೆ ಈಗ ಖಾಸಗಿ ಹಾಸ್ಪಿಟಲ್‌ಗಳಲ್ಲೂ ಕೋವಿಡ್ ಚಿಕಿತ್ಸೆಗೆ ಅನುವು ಮಾಡಿ ಕೊಡಲಾಗಿದೆ. ಆದರೆ, ಇತ್ತೀಚೆಗೆ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗ್ತಿಲ್ಲ ಹಾಗೂ ಆಸ್ಪತ್ರೆಯಲ್ಲಿ ಬೆಡ್ಗಳು ಖಾಲಿ ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ಕೋವಿಡ್ ಬೆಡ್ ಸಿಗದಿರಲು ಕಾರಣವೇನು ಅನ್ನೋದನ್ನ ನೋಡೋದಾದ್ರೇ ..
ಉದ್ಯಾನ ನಗರಿಯಲ್ಲಿ ಗುಣ ಮುಖರಿಗಿಂತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವಾರದಿಂದ ದಾಖಲೆಯ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಕಳೆದ 7 ದಿನಗಳಲ್ಲಿ 5,238 ಮಂದಿ ಸೋಂಕಿತರು ದಾಖಲಾಗಿದ್ದಾರೆ. ಆದರೆ, ಡಿಸ್ಚಾರ್ಜ್ ಆದವರ ಸಂಖ್ಯೆ ಮಾತ್ರ ಕೇವಲ 244 ಮಂದಿ ಅಷ್ಟೇ.. ಇತ್ತ ಮೂರು ದಿನ ಶೂನ್ಯ ಸಂಖ್ಯೆಯಲ್ಲಿದೆ.
ರೋಗ ಲಕ್ಷಣಗಳಿಲ್ಲದಿದ್ರೂ ಡಿಸ್ಚಾರ್ಜ್ ಮಾಡದ ಸ್ಥಿತಿ : ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಡಿಸ್ಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಸೋಂಕು ಕಾಣಿಸಿಕೊಂಡ ಬಳಿಕ ಆಸ್ಪತ್ರೆಯಲ್ಲಿ 1 ವಾರಗಳ ಚಿಕಿತ್ಸೆ ನೀಡಲಾಗುತ್ತೆ. ಡಿಸ್ಚಾರ್ಜ್ಗೂ ಮುನ್ನ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಿ ನೆಗೆಟಿವ್ ಬಂದ ನಂತರ ಮನೆಗೆ ಕಳುಹಿಸಲಾಗುತ್ತೆ. ಆದರೆ, ನಗರದ ಹಲವು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವು ರೋಗಿಗಳಿಗೆ ಪದೇಪದೆ ಪರೀಕ್ಷೆ ನಡೆಸಿದ್ರೂ ಪಾಸಿಟಿವ್ ಬರ್ತಿದೆ.
ಆದರೆ, ಅವರಿಗೆ ಯಾವುದೇ ರೋಗ ಲಕ್ಷಣಗಳಾಗಲಿ, ಉಸಿರಾಟದ ತೊಂದರೆಯಾಗಲಿ ಇಲ್ಲ. ಪೂರ್ತಿ ಸರಿ ಇದ್ದರೂ ಅವರನ್ನು ಪರೀಕ್ಷೆ ನಡೆಸಿದಾಗ ಪಾಸಿಟಿವ್ ರಿಪೋರ್ಟ್ ಬರ್ತಿದೆ. ಹೀಗಾಗಿ ಅಂಥವರನ್ನ ಡಿಸ್ಚಾರ್ಜ್ ಮಾಡುವುದಕ್ಕೆ ಆಗ್ತಿಲ್ಲ ಅಂತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ. ಹೀಗಾಗಿ ಸೋಂಕಿತರು ಬೇಗ ಗುಣಮುಖರಾಗಿ ಡಿಸ್ಚಾರ್ಜ್ ಆದ್ರೆ, ಹೊಸ ಸೋಂಕಿತರಿಗೆ ಬೆಡ್ ಸಿಗಲಿದೆ. ಆದರೆ, ಕೊರೊನಾ ದಿನೇದಿನೆ ಹೊಸ ಹೊಸ ರೂಪ ಪಡೆಯುತ್ತಿರೋದು ಕಗ್ಗಂಟಾಗಿದೆ.