ಬೆಂಗಳೂರು: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಜಟಿಲ ಸರ್ಕಾರಿ ಆದೇಶ ಹೊರಡಿಸುವಲ್ಲಿ ಸರ್ಕಾರ ತಲೆ ಕೆಡಿಸಿಕೊಂಡಿದೆ. ಶೇ 50ರಷ್ಟು ಮಿತಿಯ ಕಾನೂನು ಸಂಕಷ್ಟ ಬಾರದ ರೀತಿಯಲ್ಲಿ, ಇತರರ ಮೀಸಲಾತಿ ಕಡಿತವಾಗದಂತೆ, ಅನಿವಾರ್ಯವಾದರೆ ಯಾರ ಮೀಸಲಾತಿ ಕಡಿತಗೊಳಿಸಬೇಕೆಂಬ ಲೆಕ್ಕಾಚಾರದೊಂದಿಗೆ ಸರ್ಕಾರಿ ಆದೇಶ ಹೊರಡಿಸಲು ಸರ್ಕಾರ ಕಸರತ್ತು ನಡೆಸುತ್ತಿದೆ.
ಎಸ್ಸಿ ಎಸ್ಟಿ ಮೀಸಲು ಹೆಚ್ಚಿಸುವ ಸರ್ಕಾರಿ ಆದೇಶ ಹೊರಡಿಸಲು ಇನ್ನೂ ಸಾಧ್ಯವಾಗಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ಆದೇಶ ಸಿದ್ಧಪಡಿಸಲಾಗುತ್ತಿದೆ. ಮೀಸಲಾತಿ ಹೆಚ್ಚಳದ ಹಿಂದೆ ಸಾಕಷ್ಟು ಗೊಂದಲ, ಕಾನೂನು ತೊಡಕಿನ ತೂಗುಗತ್ತಿ ಇದ್ದು, ಬಹಳ ಜಾಗರೂಕತೆಯಿಂದ ಅಳೆದು ತೂಗಿ ಸ್ಪಷ್ಟವಾದ ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಆದೇಶವನ್ನು ಬಹಳ ಎಚ್ಚರಿಕೆಯಿಂದ ಸಮತೋಲಿತವಾಗಿ ಹೊರಡಿಸಲು ಕಸರತ್ತು ನಡೆಸುತ್ತಿದೆ. ಇದೇ ಕಾರಣದಿಂದ ಸರ್ಕಾರಿ ಆದೇಶ ಹೊರಬೀಳುವುದು ವಿಳಂಬವಾಗುತ್ತಿದೆ.
(ಓದಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ: ತಕ್ಷಣ ಆದೇಶ ಹೊರಡಿಸಲು ನಿರ್ಧಾರ)
ಈ ಸರ್ಕಾರದ ಆದೇಶದ ಮೇರೆಗೆ ಹಲವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸರ್ಕಾರ ಅಳೆದು ತೂಗಿ, ಯಾವುದೇ ಗೊಂದಲಗಳು, ಕಾನೂನು ನ್ಯೂನತೆಗೆ ಅವಕಾಶ ಇಲ್ಲದಂತೆ ಸಮಗ್ರ ಸರ್ಕಾರಿ ಆದೇಶ ಹೊರಡಿಸುವ ಪ್ರಕ್ರಿಯೆಯಲ್ಲಿದೆ. ಇನ್ನೆರಡು ಮೂರು ದಿನದೊಳಗೆ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಮತೋಲಿತ ಸರ್ಕಾರಿ ಆದೇಶ ಹೊರಡಿಸುವ ತಲೆನೋವು: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ತೀರ್ಮಾನ ಶೇ50ರಷ್ಟು ಗಡಿ ದಾಟುವ ಕಾನೂನು ತೊಡಕು ಎದುರಿಸುತ್ತಿದೆ. ಎಸ್ಸಿ, ಎಸ್ಟಿ ಮೀಸಲಾತಿಯನ್ನು ಒಟ್ಟು 6% ಹೆಚ್ಚಿಸಿರುವುದರಿಂದ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ತಲುಪಲಿದೆ. ಸುಪ್ರೀಂ ಕೋರ್ಟ್ ವಿಧಿಸಿರುವ ಶೇ 50 ಮೀಸಲಾತಿ ಗಡಿ ದಾಟಲಿದೆ. ಇದೇ ಕಾನೂನು ಅಡ್ಡಿಗೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಮೀಸಲಾತಿ ಹೆಚ್ಚಳದ ಆದೇಶವನ್ನು ಬಹಳ ಎಚ್ಚರಿಕೆಯಿಂದ ರೂಪಿಸುತ್ತಿದೆ.
(ಓದಿ: ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಬಹುದು: ನ್ಯಾ ನಾಗಮೋಹನದಾಸ್ ಸಂದರ್ಶನ)
ಶೇ 50ರಷ್ಟು ಮಿತಿಯೊಳಗೆ ಹೇಗೆ 6ರಷ್ಟು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಪ್ರಮಾಣವನ್ನು ತರಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಶೇ 50ರ ಗಡಿಯೊಳಗೆ ಮೀಸಲಾತಿಯನ್ನು ಇರಿಸುವ ಕಸರತ್ತಿಗೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಇತರೆ ಮೀಸಲಾತಿಯನ್ನು ಕಡಿತಗೊಳಿಸುವ ಅನಿವಾರ್ಯತೆಯೂ ಎದುರಾಗಿದೆ. ಇತರರ ಮೀಸಲಾತಿ ಕಡಿತಗೊಳಿಸದೇ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸಬೇಕಾ? ಅಥವಾ ಕಾನೂನು ತೊಡಕಾಗದಂತೆ ಶೇ 50ರ ಮಿತಿಯೊಳಗಿರಿಸಲು ಇತರರ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಬೇಕಾ ಎಂಬ ಗೊಂದಲದಲ್ಲಿ ಸರ್ಕಾರ ಇದೆ ಎನ್ನಲಾಗಿದೆ.
ಇತರ ಸಮುದಾಯಗಳ ಮೀಸಲಾತಿ ಕಡಿತ ಇಲ್ಲ ಎಂದು ಸಿಎಂ ಹೇಳಿದ್ದರೂ, ಶೇ50ರ ಮಿತಿಯಲ್ಲಿ ಇರಿಸಲು ಕಡಿತ ಮಾಡುವುದು ಅನಿವಾರ್ಯ ಎಂಬ ಮಾತುಗಳನ್ನು ಕಾನೂನು ಇಲಾಖೆಯ ಮೂಲಗಳು ತಿಳಿಸಿವೆ. ಹೀಗಾಗಿ ಕೆಲ ಸುಮುದಾಯದ ಮೀಸಲಾತಿ ಕಡಿತ ಮಾಡುವ ಬಗ್ಗೆನೂ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದೇಶದಲ್ಲಿ ಕಡಿತಗೊಳ್ಳುವ ಇತರರ ಮೀಸಲಾತಿ ವಿವರವನ್ನೂ ವಿವರಿಸಲಾಗುವುದು ಎನ್ನಲಾಗಿದೆ. ಈ ಹಿನ್ನೆಲೆ ಜಟಿಲ ಆದೇಶ ಸಿದ್ಧಪಡಿಸುವುದು ಸರ್ಕಾರಕ್ಕೆ ತಲೆ ನೋವಾಗಿದೆ.
(ಓದಿ: ಮೀಸಲು ಹೆಚ್ಚಳ ಆದೇಶ ಜಾರಿಗೆ ಯಾವುದೇ ಕಾನೂನು ತೊಡಕುಗಳಿಲ್ಲ: ನ್ಯಾ ನಾಗಮೋಹನದಾಸ್ ಸಂದರ್ಶನ)
ಆದೇಶದಲ್ಲಿ ಸೇರಿಸಬಹುದಾದ ಅಂಶಗಳು ಏನು?: ಇಂದಿರಾ ಸಹಾನಿ ಪ್ರಕರಣದ ಆಧಾರದಲ್ಲಿ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುವುದನ್ನು ವಿಶೇಷ ಪ್ರಕರಣವೆಂದು ಏಕೆ ಪರಿಗಣಿಸಲಾಗಿದೆ ಎಂಬ ಅಂಶವನ್ನು ಆದೇಶದಲ್ಲಿ ಉಲ್ಲೇಖಗೊಳ್ಳಲಿದೆ ಎನ್ನಲಾಗಿದೆ. ರಾಜ್ಯದ ಎಸ್ಟಿ, ಎಸ್ಸಿ ಸಮುದಾಯ ಶೈಕ್ಷಣಿಕ, ಸಾಮಾಜಿಕವಾಗಿ ಮುಖ್ಯವಾಹಿನಿಯಿಂದ ದೂರು ಉಳಿದಿದ್ದಾರೆ ಎಂಬುದನ್ನು ಅಂಕಿಅಂಶದೊಂದಿಗೆ ವಿಶ್ಲೇಷಿಸಿ, ಇದೊಂದು ವಿಶೇಷ ಪ್ರಕರಣ ಎಂಬುದನ್ನು ಆದೇಶದಲ್ಲಿ ಸೇರಿಸುವ ಸಾಧ್ಯತೆ ಇದೆ.
ಇತ್ತ ಆರ್ಥಿಕವಾಗಿ ದುರ್ಬಲರಿಗೆ ಕೇಂದ್ರ ಸರ್ಕಾರ ನೀಡಿದ ಶೇ 10ರ ಮೀಸಲಾತಿ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ 10ರ ಮೀಸಲಾತಿ ಕೊಡುವ ಮೂಲಕ ಶೇ 50ರ ಗಡಿ ದಾಟಿದೆ. ಅದೇ ರೀತಿಯಲ್ಲಿ ವಿಶೇಷ ಪ್ರಕರಣವೆಂದು ರಾಜ್ಯದಲ್ಲಿ ಎಸ್ಸಿ (2%), ಎಸ್ಟಿ (4%) ಮೀಸಲಾತಿಯನ್ನು ಹೆಚ್ಚಿಸಲಾಗಿದೆ ಎಂಬ ಅಂಶವನ್ನು ಆದೇಶದಲ್ಲಿ ಸೇರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.