ಬೆಂಗಳೂರು: ಸಿಎಂ ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮಗೆ ಪುನರ್ಜನ್ಮ ಕೊಟ್ಟ ಕ್ಷೇತ್ರಕ್ಕೆ ಏಕೆ ಭೇಟಿ ನೀಡಿಲ್ಲವೆಂದು ಮಾಜಿ ಸಚಿವ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈಗ ಬಾದಾಮಿ ಕ್ಷೇತ್ರದಲ್ಲಿ ಮಳೆ, ಪ್ರವಾಹ ಇದೆ. ಸಿದ್ದರಾಮಯ್ಯ ತಮಗೆ ಪುನರ್ಜನ್ಮ ಕೊಟ್ಟ ಕ್ಷೇತ್ರಕ್ಕೆ ಭೇಟಿ ನೀಡಲಿ ಎಂದು ಒತ್ತಾಯಿಸಿದರು.
ಇನ್ನು ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾವ ರೀತಿ ಅಧಿಕಾರ ನಡೆಸಿದರು ಅಂತ ಜನರಿಗೆ ಗೊತ್ತಿದೆ. ಮೈಸೂರು ಭಾಗ ಬಿಟ್ಟು ಉತ್ತರ ಕರ್ನಾಟಕಕ್ಕೆ ಸಿದ್ದರಾಮಯ್ಯ ಪ್ರವಾಸ ಮಾಡಿರಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಗಳಿಗೆ ಸಿದ್ದರಾಮಯ್ಯ ಭೇಟಿ ಕೊಟ್ಟಿರಲಿಲ್ಲ, ಸಿದ್ಧರಾಮಯ್ಯ ಹೊಣೆಗಾರಿಕೆಯಿಂದ ಕರ್ತವ್ಯ ನಿಭಾಯಿಸಲಿ ಎಂದು ರೇಣುಕಾಚಾರ್ಯ ಗಡುಗಿದರು.
ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಏಕಪಕ್ಷೀಯ ಸರ್ಕಾರ ಅಂತ ಪ್ರತಿಪಕ್ಷದವರು ಟೀಕಿಸುತ್ತಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಹತಾಶೆಯಿಂದ ಹೇಳಿಕೆ ಕೊಡುತ್ತಿದ್ದಾರೆ. ಜಿಲ್ಲಾ ಪ್ರವಾಸ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿಯೂ ಕರ್ತವ್ಯ ನಿಭಾಯಿಸಿದ್ರು. ಈಗ ಸಿಎಂ ಆಗಿ ಯಡಿಯೂರಪ್ಪ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಅಧಿಕಾರಕ್ಕಾಗಿ ಮಾಟ ಮಂತ್ರ ಮಾಡಿಸಿದರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಕುಮಾರಸ್ವಾಮಿ ಅವ್ರು ನಾಡಿನ ಜನತೆಗಾಗಿ ದೇವಸ್ಥಾನಗಳಿಗೆ ಭೇಟಿ ಕೊಡಲಿಲ್ಲ. ಅಧಿಕಾರ ಹಿಡಿಯಲು ಕುಮಾರಸ್ವಾಮಿ ದೇವಸ್ಥಾನಗಳಿಗೆ ಸುತ್ತಿದರು. ಮಾಟ ಮಂತ್ರ ಮಾಡಿಸಿದವರು ನೀವು. ಆದರೆ, ಜನತೆಗಾಗಿ ಹೋಮ ಹವನ ಮಾಡಿಸ್ಲಿಲ್ಲ ಎಂದು ಮಾಜಿ ಸಚಿವ ಕಿಡಿಕಾರಿದರು.
ಯಡಿಯೂರಪ್ಪ ಎಲ್ಲಿದೀಯಪ್ಪ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಿಖಿಲ್ ಎಲ್ಲಿದೀಯಪ್ಪ ಅಂತ ಮಾಧ್ಯಮದವರು ಹೈಲೈಟ್ ಮಾಡಿದ್ದರು. ಯಡಿಯೂರಪ್ಪ ಎಲ್ಲಿದೀಯಪ್ಪ ಅಂತಿದ್ದೀರಲ್ಲ, ಯಡಿಯೂರಪ್ಪ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರಕ್ಕಾಗಿ, ಕಾಲಹರಣಕ್ಕೆ ದೆಹಲಿಗೆ ಹೋಗಲಿಲ್ಲ. ಅಭಿವೃದ್ಧಿ ವಿಚಾರ ಕುರಿತು ಚರ್ಚಿಸಲು ಕೇಂದ್ರದ ಸಚಿವರನ್ನು ಭೇಟಿ ಮಾಡಿದ್ದರು ಎಂದು ರೇಣುಕಾಚಾರ್ಯ ಟಾಂಗ್ ಕೊಟ್ಟರು.
ಸಚಿವ ಸಂಪುಟ ರಚನೆ ಬಗ್ಗೆ ಗೊತ್ತಿಲ್ಲ: ಸಚಿವ ಸಂಪುಟ ರಚನೆ ಬಗ್ಗೆ ನನಗೆ ಗೊತ್ತಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದು ಇದೇ ವೇಳೆ ಅವರು ತಿಳಿಸಿದರು. ಸಂಪುಟ ರಚನೆ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತು ನಮ್ಮ ವರಿಷ್ಠರು ತೀರ್ಮಾನ ತಗೋತಾರೆ. ನಾವ್ಯಾರೂ ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಮಾಜಿ ಸಚಿವ ಸ್ಪಷ್ಟಪಡಿಸಿದ್ರು.