ಬೆಂಗಳೂರು: ಕಳೆದ ವರ್ಷದ ಜೂನ್ ತಿಂಗಳಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯ ಬೆಲೆ ರೂ. 100ರ ಆಸುಪಾಸಿನಲ್ಲಿದ್ದು, ಈ ವರ್ಷ ಜನವರಿ ತಿಂಗಳಷ್ಟರಲ್ಲಿ ಪ್ರತಿ ಲೀಟರ್ ಎಣ್ಣೆ ಬೆಲೆ ರೂ. 160ಕ್ಕೆ ಏರಿಕೆ ಆಗಿದೆ. ಬೆಲೆ ಏರಿಕೆ ನಿಯಂತ್ರಣ ಮಾಡಲು ಆಮದು ಸುಂಕವನ್ನು ಕಡಿತಗೊಳಿಸಲು ಸರ್ಕಾರಕ್ಕೆ ಕೆಲ ಸಂಘಸಂಸ್ಥೆಗಳು ಮನವಿ ಮಾಡಿದ್ದವು. ಹಾಗು ಅವರ ಲೆಕ್ಕಾಚಾರದ ಪ್ರಕಾರ ಮಾರ್ಚ್-ಏಪ್ರಿಲ್ ತಿಂಗಳ ಅಂತ್ಯದಲ್ಲಿ ಬೆಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ಅಂದಾಜಿಸಿದ್ದರು. ಆದರೂ ಈವರೆಗೆ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗದೆ ಏರುತ್ತಲೇ ಇದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಸಾಸಿವೆ ಎಣ್ಣೆ- 40 %, ಸೂರ್ಯಕಾಂತಿ ಎಣ್ಣೆ -52%, ಸೋಯಾ ಎಣ್ಣೆ- 34%, ಅಕ್ಕಿ ಹೊಟ್ಟಿನ ಎಣ್ಣೆ- 33% ಹಾಗು ತಾಳೆ ಎಣ್ಣೆ ಬೆಲೆ ಶೇ. 37ರಷ್ಟು ಏರಿಕೆ ಕಂಡಿವೆ. ಹಾಗು ಚಿಲ್ಲರೆ ಅಂಗಡಿಗಳಲ್ಲೂ ಇದರ ಪರಿಣಾಮ ಬೀರಿದ್ದು, ವನಸ್ಪತಿ ಎಣ್ಣೆ- 55%, ತಾಳೆ ಎಣ್ಣೆ- 51%, ಸೋಯಾ ಎಣ್ಣೆ- 50%, ಸಾಸಿವೆ ಎಣ್ಣೆ- 49%, ಕಡಲೇಕಾಯಿ ಎಣ್ಣೆ- 38% ರಷ್ಟು ಏರಿಕೆ ಆಗಿದೆ. ಭಾರತದಲ್ಲಿ ತಾಳೆ ಎಣ್ಣೆ , ಸೂರ್ಯಕಾಂತಿ ಎಣ್ಣೆ ಹಾಗು ಸೋಯಾ ಎಣ್ಣೆ ಬಳಕೆ ಹೆಚ್ಚಿದ್ದು ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ತಿಂಗಳ ದಿನಸಿ ಖರೀದಿ ಬೆಲೆ ದುಬಾರಿಯಾಗುತ್ತಲೇ ಇದೆ.
ಬೆಲೆ ಏರಿಕೆಗೆ ಕಾರಣ ಏನು?
- ತಾಳೆ ಎಣ್ಣೆ : ವಿಶ್ವದಲ್ಲಿ ಶೇ. 80%ರಷ್ಟು ತಾಳೆ ಎಣ್ಣೆ ಮಲೇಷಿಯಾ ಹಾಗು ಇಂಡೋನೇಷ್ಯಾ ರಾಷ್ಟ್ರಗಳಲ್ಲಿ ಉತ್ಪಾದನೆ ಆಗವುದು. ಮಲೇಷಿಯಾ ದೇಶ ಕಾಶ್ಮೀರ ರಾಜ್ಯದ ವಿರುದ್ಧದ ಹೇಳಿಕೆಯಿಂದ ಭಾರತ ತಾಳೆ ಎಣ್ಣೆಯ ಆಮದು ನಿಲ್ಲಿಸಿತ್ತು. ನಂತರ 2020ರಲ್ಲಿ ಮತ್ತೆ ತಾಳೆ ಎಣ್ಣೆ ಆಮದು ಮಾಡುವುದಕ್ಕೆ ಅವಕಾಶ ನೀಡಿದ್ದರು. ಕೋವಿಡ್ ಮಹಾಮಾರಿಯಿಂದ ಜಗತ್ತೇ ಲಾಕ್ಡೌನ್ನ ಮೊರೆ ಹೋಗಿತ್ತು. ಈ ಕಾರಣದಿಂದ ಅಲ್ಲಿಯೂ ಅಗತ್ಯಕ್ಕೆ ತಕ್ಕಂತ ಉತ್ಪಾದನೆ ಆಗಿಲ್ಲ. ನಂತರ ಚೀನಾ ದೇಶದ ಆರ್ಥಿಕ ಚೇತರಿಕೆ ವೇಗವಾಗಿ ಆಗುತ್ತಿದ್ದು, ಮಲೇಷಿಯಾ ದೇಶದಿಂದ ಆಮದು ಆಗುತ್ತಿದ್ದ ತಾಳೆ ಎಣ್ಣೆ ಪ್ರಮಾಣವನ್ನು 31%ಕ್ಕೆ ಹೆಚ್ಚಿಸಿವೆ. ಇದರ ಪರಿಣಾಮ ವಿಶ್ವದಲ್ಲಿ ತಾಳೆ ಎಣ್ಣೆ ಕೊರತೆ ಹೆಚ್ಚಾಗುತ್ತಿದೆ.
- ಸೋಯಾ ಎಣ್ಣೆ: ಸೋಯಾ ಎಣ್ಣೆ ಹಾಗು ಸೋಯಾ ಬೀಜಗಳಿಗೆ ಬ್ರೆಸಿಲ್ ಮತ್ತು ಅರ್ಜೆಂಟೈನಾ ರಾಷ್ಟ್ರ ಹೆಸರುವಾಸಿ. ಕಳೆದ ಒಂದು ವರ್ಷದಿಂದ ಅಲ್ಲಿನ ಹವಾಮಾನದಲ್ಲಿ ಏರುಪೇರಾಗಿದ್ದು, ಅನೇಕ ಭಾಗಗಳಲ್ಲಿ ಬರ ಇರುವ ಕಾರಣ ಕೃಷಿ ಚಟುವಟಿಕೆ ನಡೆಸಲು ಆಗುತ್ತಿಲ್ಲ, ಹಾಗೂ ಕೋವಿಡ್, ಲಾಕ್ಡೌನ್ ಕೂಡ ಕಾರಣವಾಗಿದ್ದು ಸೋಯಾ ಎಣ್ಣೆ ಬೆಲೆ ಏರುತ್ತಿದೆ.
- ಸೂರ್ಯಕಾಂತಿ ಎಣ್ಣೆ: ರಷ್ಯಾ ಹಾಗು ಯುಕ್ರೇನ್ ರಾಷ್ಟ್ರ ವಿಶ್ವದಲ್ಲೇ ಸೂರ್ಯಕಾಂತಿ ಬೀಜ ರಫ್ತಿನ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಭಾರತವೂ ಬಹುಪಾಲಿನ ಸೂರ್ಯಕಾಂತಿ ಬೀಜಗಳನ್ನು ಆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಕಳೆದ ಕೆಲ ವರ್ಷಗಳಲ್ಲಿ 4-5 ಮಿಲಿಯನ್ ಟನ್ ಉತ್ಪಾದನೆ ಕಡಿಮೆ ಆಗಿದೆ. ಈ ಕಾರಣದಿಂದ ಸೂರ್ಯಕಾಂತಿ ಎಣ್ಣೆ ಬೆಲೆ ಏರಿಕೆ ಆಗುತ್ತಿದೆ.
ಭಾರತ 70% ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಹಾಗಾಗಿ ಸಹಜವಾಗಿ ಬೆಲೆ ಏರಿಕೆ ಆಗುತ್ತದೆ.
ಸರ್ಕಾರ ಬೆಲೆ ನಿಯಂತ್ರಣಕ್ಕೆ ಏನು ಮಾಡಿದೆ?
ಆಮದು ಸುಂಕ ನಮ್ಮ ದೇಶದಲ್ಲಿ ಶೇ. 60-70 ರಷ್ಟು ಇದೆ. ಈ ದುಬಾರಿ ಆಮದು ಸುಂಕವನ್ನು ಇಳಿಕೆ ಮಾಡುವುದಕ್ಕೆ ಅನೇಕ ಜನರ ಬೇಡಿಕೆ ಇದೆ. ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಶೇ. 10ರಷ್ಟು ಸುಂಕವನ್ನು ಇಳಿಕೆ ಮಾಡಿತ್ತು. ಯಾವ ದೇಶಗಳಿಂದ ಕಚ್ಚಾ ವಸ್ತುಗಳು ಬರುವುದೋ ಆ ರಾಷ್ಟ್ರಗಳು ಬೆಲೆ ಏರಿಕೆ ಮಾಡಿವೆ. ಇದಲ್ಲದೆ ಕೇಂದ್ರ ಕೃಷಿ ಮೂಲಭೂತ ಸೌಕರ್ಯ ಹಾಗು ಅಭಿವೃದ್ಧಿ ಸೆಸ್ (AIDC) ಅಧಿಕ ಸುಂಕವನ್ನು ತಾಳೆ ಎಣ್ಣೆಗೆ 17.5%, ಸೂರ್ಯಕಾಂತಿ ಎಣ್ಣೆಗೆ 20%ರಷ್ಟು ಭರಿಸಬೇಕಿದೆ. ಈವರೆಗೆ ಸರ್ಕಾರ ಈ ಸುಂಕವನ್ನ ಕಡಿತ ಮಾಡಿಲ್ಲ.