ಬೆಂಗಳೂರು: ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದ್ದು, ಈ ಅದೃಷ್ಟ ಯಾರಿಗೆ ಒಲಿಯಲಿದೆ ಎನ್ನುವ ಕುತೂಹಲ ಈಗ ಎಲ್ಲರಲ್ಲಿ ಮೂಡಿದೆ.
ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್ ತೀವ್ರ ಪೈಪೋಟಿ ನಡೆಸಿದ್ದರು. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಒಂದು ಹಂತದವರೆಗೆ ಪ್ರಯತ್ನಿಸಿ ಸುಮ್ಮನಾಗಿದ್ದರು. ಈಗಲೂ ಸಹ ಸಿದ್ದರಾಮಯ್ಯ ಹೆಸರೇ ಮುಂಚೂಣಿಯಲ್ಲಿದ್ದು, ಅವರಿಗೆ ಎಚ್.ಕೆ. ಪಾಟೀಲ್ ಪ್ರಬಲ ಪೈಪೋಟಿ ಒಡ್ಡಿದ್ದಾರೆ.
ಸಿದ್ದು ವಿರುದ್ಧ ಎಚ್ಕೆಪಿ..
ಇಡಿ ತನಿಖೆ ಹಿನ್ನೆಲೆ ಸ್ಪರ್ಧೆಯಿಂದ ಡಿಕೆಶಿ ಹಿಂದೆ ಸರಿದಿದ್ದು, ಎಂ.ಬಿ. ಪಾಟೀಲ್ ಯಾವುದೇ ಸ್ಪರ್ಧೆ ಒಡ್ಡುತ್ತಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಸಿಗಬೇಕೆಂದು ಕೆಲವರು ಹಾಗೂ ಮತ್ತೆ ಕೆಲವರು ಸಿದ್ದರಾಮಯ್ಯಗೆ ಮತ್ತೆ ಅಧಿಕಾರ ಸಿಗಬಾರದು ಎಂಬ ಕಾರಣಕ್ಕೆ ಎಚ್ಕೆಪಿಗೆ ಬೆಂಬಲ ನೀಡುತ್ತಿದ್ದಾರೆ.
ಸಿದ್ದರಾಮಯ್ಯ ಬೆಂಬಲಿಗರು ಕೈ ಕೊಟ್ಟಿದ್ದರಿಂದ ಮೈತ್ರಿ ಸರ್ಕಾರ ಪಥನವಾಗಿದೆ. ಮನಸ್ಸು ಮಾಡಿದ್ದರೆ ಸಿದ್ದರಾಮಯ್ಯ ಇವರನ್ನೆಲ್ಲಾ ತಡೆಯಬಹುದಿತ್ತು, ಹೋದವರನ್ನು ಮರಳಿ ಕರೆಸಬಹುದಿತ್ತು. ಅಲ್ಲದೇ ಅವರು ತಮ್ಮ ಹಾಗೂ ತಮ್ಮವರ ಬೆಳವಣಿಗೆಗೆ ಕಾರ್ಯನಿರ್ವಹಿಸಿದ್ದಾರೆಯೇ ಹೊರತು ಬೇರೆ ನಾಯಕರನ್ನು ಬೆಳೆಸುವ ಪ್ರಯತ್ನ ಮಾಡಿಲ್ಲ. ಆದ್ದರಿಂದ ಎಚ್.ಕೆ. ಪಾಟೀಲ್ ಪಕ್ಷಕ್ಕೆ ನಿಷ್ಠರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಅವಕಾಶ ನೀಡಬೇಕು. ಆ ಮೂಲಕ ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಕೇವಲ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಹಂಚಿಕೆಯಾಗಿದೆ ಎಂಬ ಆರೋಪಕ್ಕೆ ತೆರೆ ಎಳೆಯಬೇಕೆಂದು ಹೈಕಮಾಂಡ್ಗೆ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಸೂಕ್ತ
ಇನ್ನೊಂದೆಡೆ ಹಿಂದೆ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಸಾಕಷ್ಟು ಜನಪರ ಯೋಜನೆ ಘೋಷಿಸಿದ್ದರು. ಅದನ್ನು ಇಂದಿನ ಸರ್ಕಾರ ತಡೆಯುವ ಕಾರ್ಯ ಮಾಡುತ್ತಿದೆ. ಅಲ್ಲದೇ ಸಿದ್ದರಾಮಯ್ಯಗೆ ಪ್ರತಿಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಗಟ್ಟಿಯಾಗಿ ದನಿಯೆತ್ತುವ ಶಕ್ತಿ ಸಿದ್ದರಾಮಯ್ಯಗೆ ಮಾತ್ರ ಇದೆ. ಆದ್ದರಿಂದ ಪ್ರತಿಪಕ್ಷದ ನಾಯಕ ಸ್ಥಾನ ಸಿದ್ದರಾಮಯ್ಯಗೆ ಸಿಗಬೇಕೆಂದು ಕೆಲವರು ಲಾಬಿ ನಡೆಸಿದ್ದಾರೆ.
ಅಲ್ಲದೇ ಕಾಂಗ್ರೆಸ್ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತವನ್ನೇ ನಂಬಿಕೊಂಡಿದೆ. ಲಿಂಗಾಯಿತರು ನಮಗೆ ಎರಡೂ ಪ್ರಮುಖ ಚುನಾವಣೆಯಲ್ಲಿ ಕೈಕೊಟ್ಟಿದ್ದಾರೆ. ಇದೀಗ ಸರ್ಕಾರದಲ್ಲಿ ಕೂಡ ಬಿಜೆಪಿ ಲಿಂಗಾಯಿತರಿಗೆ ಮಣೆ ಹಾಕಿದೆ. ಇದರಿಂದ ಆ ಮತದಾರರನ್ನು ಸೆಳೆಯುವಲ್ಲಿ ಎಚ್.ಕೆ. ಪಾಟೀಲ್ ವಿಫಲರಾಗುತ್ತಾರೆ. ಇದರಿಂದ ನಮ್ಮ ಹಿಂದುಳಿದ ವರ್ಗಗಳ ಮತ ಉಳಿಸಿಕೊಳ್ಳಲು ಸಿದ್ದರಾಮಯ್ಯಗೆ ಮಣೆ ಹಾಕುವುದೇ ಸೂಕ್ತ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಅನಿವಾರ್ಯತೆ ಇದ್ದು, ಅದಕ್ಕೆ ಸಿದ್ದರಾಮಯ್ಯ ಸೂಕ್ತ ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.
ಇಂದು ದಿಲ್ಲಿಯಲ್ಲಿ ಸೋನಿಯಾಗಾಂಧಿ ನೇತೃತ್ವದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕರ ಆಯ್ಕೆ ಆಗಲಿದೆ. ಅಲ್ಲಿ ಸಿದ್ದರಾಮಯ್ಯ ಪರ ದನಿ ಎತ್ತಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೆರಳಿದ್ದಾರೆ. ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಪರಿಸ್ಥಿತಿ ನೋಡಿಕೊಂಡು ಮಾತನಾಡುವ ಸಾಧ್ಯತೆ ಇದೆ. ಎಚ್.ಕೆ. ಪಾಟೀಲ್ ಅವರನ್ನು ಬೆಂಬಲಿಸುವ ಇಚ್ಛೆ ಇದ್ದರೂ, ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಅವರು ಕೂಡ ಸಿದ್ದರಾಮಯ್ಯ ಪರ ವಾದ ಮಾಡಬಹುದು ಎನ್ನಲಾಗುತ್ತಿದೆ.
ಒಟ್ಟಾರೆ ಸದ್ಯ ಪ್ರತಿಪಕ್ಷದ ನಾಯಕರಾಗಲು ಸಿದ್ದರಾಮಯ್ಯ ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗೆ ಎಚ್.ಕೆ. ಪಾಟೀಲ್ ಅಡ್ಡ ನಿಂತಿದ್ದು, ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಸಂಜೆಯ ವೇಳೆಗೆ ತಿಳಿಯಲಿದೆ.