ಬೆಂಗಳೂರು: ಮಾಜಿ ಸಚಿವ ಬಿ. ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ನಿಂದ ಹಲವು ಆಕಾಂಕ್ಷಿಗಳಿದ್ದಾರೆ. ಆದರೆ, ಜೆಡಿಎಸ್ ವರಿಷ್ಠರ ಒಲವು ಯಾರ ಕಡೆ ಇದೆ ಎಂಬುದು ಮಾತ್ರ ನಿಗೂಢವಾಗಿದೆ.
ದಿ.ಸತ್ಯನಾರಾಯಣ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದ್ದು, ಒಂದು ವೇಳೆ ಸತ್ಯನಾರಾಯಣ ಅವರ ಕುಟುಂಬದವರು ಸ್ಪರ್ಧೆಗೆ ಒಲವು ತೋರದಿದ್ದರೆ ಮಾತ್ರ ಸ್ಥಳೀಯರಿಗೆ ಉಪ ಚುನಾವಣೆ ಟಿಕೆಟ್ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸತ್ಯನಾರಾಯಣ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದ್ದು, ಕೇಂದ್ರ ಚುನಾವಣಾ ಆಯೋಗವು ಇನ್ನೂ ಚುನಾವಣಾ ವೇಳಾಪಟ್ಟಿ ಪ್ರಕಟಿಸಿಲ್ಲ. ಆದರೂ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಸಿದ್ಧತೆ ಆರಂಭವಾಗಿದೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಶಿರಾ ಕ್ಷೇತ್ರದ ಉಪ ಚುನಾವಣೆಗೆ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸುವ ಒಲವು ತೋರಿದ್ದಾರೆ. ಆದರೆ, ಸತ್ಯನಾರಾಯಣ ಅವರ ಪತ್ನಿ ಸ್ಪರ್ಧಿಸಲು ಇದುವರೆಗೆ ಸಮ್ಮತಿಸಿಲ್ಲ ಎನ್ನಲಾಗ್ತಿದೆ.
ಸತ್ಯನಾರಾಯಣ ಅವರ ಪತ್ನಿ ಸ್ಪರ್ಧೆ ನಿರಾಕರಿಸಿದರೆ ಪುತ್ರ ಬಿ.ಎಸ್. ಸತ್ಯಪ್ರಕಾಶ್ ಅವರನ್ನು ಕಣಕ್ಕಿಳಿಸುವ ಉದ್ದೇಶವಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಸತ್ಯಪ್ರಕಾಶ್ ಕೂಡ ಸ್ಪರ್ಧೆ ಮಾಡದಿದ್ದರೆ, ಸ್ಥಳೀಯ ಆಕಾಂಕ್ಷಿಯೊಬ್ಬರಿಗೆ ಟಿಕೆಟ್ ನೀಡಲಾಗುತ್ತದೆ. ಶಿರಾ ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳು ಟಿಕೆಟ್‍ಗಾಗಿ ಪಕ್ಷದ ವರಿಷ್ಠರನ್ನು ಸಂಪರ್ಕಿಸಿದ್ದಾರೆ. ಆದರೆ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ವರಿಷ್ಠರು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಹಾಗೂ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಇನ್ನೂ ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸಹ ಶಿರಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಉಪ ಚುನಾವಣೆಗೆ ಕಸರತ್ತು ಆರಂಭಿಸಿವೆ. ಇದೇ ತಿಂಗಳ 21 ರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಅಧಿವೇಶನ ಮುಗಿದ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.