ಬೆಂಗಳೂರು: ವಿಧಾನ ಪರಿಷತ್ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡಲು ಮುಂದಾಗಿದ್ದು, ನಾಳೆ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ.
ಅವಿಶ್ವಾಸ ನಿರ್ಣಯದ ಕುರಿತ ಪ್ರಸ್ತಾವನೆ ನಾಳೆ ವಿಧಾನ ಪರಿಷತ್ ಕಲಾಪದಲ್ಲಿ ಬರಲಿದ್ದು, ಆಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಇಂದು ಸಂಜೆಯೇ ರಾಜೀನಾಮೆ ನೀಡುವ, ಇಲ್ಲ ನಾಳೆ ರಾಜೀನಾಮೆ ನೀಡುವ ಅಥವಾ ಕಲಾಪದ ಕಡೆಯ ದಿನವಾದ ಫೆಬ್ರವರಿ 5 ರಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಸಭಾಪತಿ ಕಚೇರಿ ಮೂಲಗಳ ಪ್ರಕಾರ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡುವುದು ಖಚಿತವಾಗಿದೆ. ಸಭಾಪತಿಗಳು ಇಚ್ಛಿಸಿದಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಸಿ ನಂತರ ನಿರ್ಣಯವನ್ನು ಮತಕ್ಕೆ ಹಾಕಬಹುದಾಗಿದೆ. ಆದರೆ ಈಗಾಗಲೇ ಪರಿಷತ್ನಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿ ಮಾಡಿಕೊಂಡಿವೆ. ಉಪ ಸಭಾಪತಿ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದ್ದು, ಅದರಂತೆ ಸಭಾಪತಿ ಸ್ಥಾನದ ವಿಚಾರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬಿಜೆಪಿ ಬೆಂಬಲಿಸುವ ಒಪ್ಪಂದಾಗಿದೆ. ಹೀಗಾಗಿ ಅಗತ್ಯ ಬಹುಮತ ಇಲ್ಲದ ಕಾರಣ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವ ಸಾಧ್ಯತೆ ಕಡಿಮೆ ಇದ್ದು, ಸಭಾಪತಿಗಳು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗ್ತಿದೆ.