ಬೆಂಗಳೂರು : ಇಡೀ ವಿಶ್ವದೆಲ್ಲೆ ಕೊರೊನಾ ವೈರಸ್ ಬಗ್ಗು ಬಡೆಯುತ್ತಿರುವುದು ವೈದ್ಯಕೀಯ ಸಿಬ್ಬಂದಿ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ಉಳಿಸಲು ಮುಂದಾಗುತ್ತಿದ್ದಾರೆ.
ಮನಸ್ಸಿನಲ್ಲಿ ದುಗುಡ, ಆತಂಕ, ಭಯ ಎಲ್ಲ ಇದ್ದರೂ ತಮ್ಮ ಬಳಿ ಬರೋ ರೋಗಿಗಳ ಮುಂದೆ ಅದ್ಯಾವುದನ್ನೂ ತೋರಿಸಿಕೊಳ್ಳೋದೇ ನಗುಮುಖದಲ್ಲಿ ತಮ್ಮ ಮೃದು ಧ್ವನಿಯಲ್ಲಿ ಅರ್ಧ ಕಾಯಿಲೆ ವಾಸಿ ಮಾಡುವ ಶಕ್ತಿ ವೈದ್ಯರಿಗಿದೆ.
ಇಂದು ರಾಷ್ಟ್ರೀಯ ವೈದ್ಯರ ದಿನ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವೈದ್ಯರ ದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ, ಕೊರೊನಾ ವೈರಸ್ನಿಂದ ವೈದ್ಯರು ಹಗಲು ರಾತ್ರಿ ಕಾರ್ಯನಿರ್ವಹಿಸುವಂತಾಗಿದೆ. ಕೊರೊನಾದ ವಿರುದ್ಧ ಗೆಲುವು ಸಾಧಿಸಲು ಮೊದಲು ಅಣಿಯಾಗಬೇಕಿದಿದ್ದೇ ವೈದ್ಯಕೀಯ ಸಿಬ್ಬಂದಿ. ಯಾಕೆಂದರೆ, ಕೇವಲ ಆ ದೇಶದಲ್ಲಿ ಕೊರೊನಾ ಹರಡಿತಂತೆ, ಈ ದೇಶದಲ್ಲಿ ಹರಡಿತಂತೆ ಅಂತಾ ಅನ್ನುವಾಗಲೇ ನಮ್ಮ ದೇಶದಲ್ಲೂ ಕೊರೊನಾ ಪತ್ತೆ ಆಗಿತ್ತು.
ಇದಾದ ಬಳಿಕ ವೈದ್ಯಕೀಯ ಸಿಬ್ಬಂದಿ ತಮ್ಮ ಕುಟುಂಬದಿಂದ ದೂರ ಸರಿದು, ಕೊರೊನಾ ಮಹಾಮರಿ ಹೊಡೆದೋಡಿಸಲು ತಯಾರಾದರು. ಮೊದ ಮೊದಲು ಭಯ-ಆತಂಕವಿದ್ದರೂ, ಮುಂದೆ ಇಟ್ಟ ಹೆಜ್ಜೆಯನ್ನ ಹಿಂದಕ್ಕೆ ತೆಗೆಯದೇ, ತಮ್ಮ ಪ್ರಾಣವನ್ನು ಲೆಕ್ಕಿಸದೇ ಯೋಧರಂತೆ ನಿಂತುಬಿಟ್ಟರು.
‘ಬಾಯಾರಿಕೆಯಾದರೆ ನೀರು ಸಹ ಕುಡಿಯುವಂತಿಲ್ಲ’ : ಬಾಯಾರಿಕೆ ಆದರೆ ನೀರು ಕುಡಿಯುವಂತಿಲ್ಲ, ಹೊಟ್ಟೆ ಚುರುಗುಟ್ಟರು ಏನನ್ನೂ ತಿನ್ನೋ ಹಾಗಿಲ್ಲ. ಕೊರೊನಾದ ಈ ಸಂದರ್ಭದಲ್ಲಿ ನಾವ್ಯಾರು ಊಹಿ ಮಾಡಿರಲಿಲ್ಲ ಎಂದು ರಾಧಾಕೃಷ್ಣ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ವೈದ್ಯೆ ಡಾ.ವಿದ್ಯಾ ಭಟ್ ತಿಳಿಸಿದ್ದಾರೆ.
ನಮಗೆ ನಮ್ಮ ಕೆಲಸದ ಬಗ್ಗೆ ಗೌರವ ಇದೆ. ಆದರೆ, ನಮ್ಮ ಒತ್ತಡ, ಸಂಕಷ್ಟದ ಕಥೆಗಳು ಸಾಕಷ್ಟಿವೆ. ಕೋವಿಡ್ ವಾರ್ಡ್ಗೆ ನಾವು ಒಳಹೊಕ್ಕರೆ ಬಾಯಾರಿಕೆ ಆದರೂ ನೀರು ಕುಡಿಯುವಂತಿಲ್ಲ. ಹೊಟ್ಟೆಯೊಳಗೆ ಸಂಕಟವಾಗಿ ಹಸಿವಾಗಿ ಹೊಟ್ಟೆ ಚುರುಕು ಗುಟ್ಟುರು ಏನನ್ನೂ ತಿನ್ನಲು ಆಗದ ಪರಿಸ್ಥಿತಿ ಉಂಟಾಗಿದೆ. ಹಾಗಂತ ನರಳುತ್ತಿರುವ ರೋಗಿಗಳನ್ನು ನೋಡದೇ ಸುಮ್ಮನೆ ಇರೋಕ್ಕೆ ಆಗಲ್ಲ ಎಂದರು. ಪ್ರಾಣ ಪಣಕ್ಕಿಟ್ಟು ರೋಗಿಗಳ ಪ್ರಾಣ ಉಳಿಸೋದು ವೈದ್ಯರ ಕರ್ತವ್ಯ. ವೈದ್ಯರ ಮೇಲೆ ಹಲ್ಲೆ ನಿಂತರೆ ಅದುವೇ ಡಾಕ್ಟರ್ಸ್ ಡೇ..