ಬೆಂಗಳೂರು: ಪಕ್ಷದ ಸಂಘಟನೆಗೆ ನಾವು ನಮ್ಮ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಯಲಹಂಕದ ಗೋಲ್ಡ್ ಫಿಂಚ್ ಹೋಟೆಲ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಅವರು ಉತ್ತರಿಸಿ, ‘ಬಿಜೆಪಿಯವರು ಏನಾದರೂ ಟೀಕೆ ಮಾಡಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಅರ್ಜಿ ಶುಲ್ಕ 5 ಸಾವಿರ ಹಾಗೂ ಅರ್ಜಿ ಸಲ್ಲಿಸುವಾಗ 2 ಲಕ್ಷ, 1 ಲಕ್ಷ ರು. ಡಿಡಿ ಪಡೆದರೆ ಬಿಜೆಪಿಯವರಿಗೇನು ನೋವು’ ಎಂದರು.
ನಿಮ್ಮ ಪಕ್ಷದ ಕಾರ್ಯಕರ್ತರೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಎಂಬ ಪ್ರಶ್ನೆಗೆ, ‘ನನ್ನ ಬಳಿ ಯಾರೂ ಕೂಡ ಅಸಮಾಧಾನ ವ್ಯಕ್ತಪಡಿಸಿಲ್ಲ. ಅಸಮಾಧಾನಗೊಳ್ಳುವವರು ಪಕ್ಷದಲ್ಲಿ ಇರುವುದು ಬೇಡ, ಅವರು ಪಕ್ಷ ತೊರೆಯಬಹುದು. ಪಕ್ಷದ ವತಿಯಿಂದ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದು ಪಕ್ಷದ ವಿಚಾರ. ಪಕ್ಷ ಉಳಿಯಬೇಕು. ಪಕ್ಷ ಹಾಗೂ ಪಕ್ಷದ ಬಾವುಟ ಕಟ್ಟುವವರು ಯಾರು? ಮಾತನಾಡುವವರು ಬಂದು ಪಕ್ಷ ಕಟ್ಟುತ್ತಾರಾ?’ ಎಂದು ಖಾರವಾಗಿ ಪ್ರಶ್ನಿಸಿದರು.
ತನಿಖೆ ಮಾಡಿ ನ್ಯಾಯ ಒದಗಿಸಲಿ: ರೇಣುಕಾಚಾರ್ಯ ಅವರ ಸಹೋದರನ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, ‘ಈ ವಿಚಾರವನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ಇಂತಹ ಘಟನೆ ಆಗಬಾರದಿತ್ತು, ಆಗಿಹೋಗಿದೆ. ಈ ರೀತಿ ಹೇಗೆ ಆಯಿತು ಎಂದು ಎಲ್ಲರಿಗೂ ಅನುಮಾನ ಬರುತ್ತದೆ. ಸರ್ಕಾರ ಈ ಬಗ್ಗೆ ತನಿಖೆ ಮಾಡಿ ನ್ಯಾಯ ಒದಗಿಸಲಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದ ಸದಸ್ಯರಿಗೆ ಧೈರ್ಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದರು.
ಕಾಂಗ್ರೆಸ್ ಬಾಗಿಲು ಕ್ಲೋಸ್ ಆಗಲಿದೆ ಎಂಬ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಕಾಂಗ್ರೆಸ್ ಬಾಗಿಲು ಮುಚ್ಚುವುದಾದರೆ, ಅವರು ಕಾಂಗ್ರೆಸ್ ಶಾಸಕರನ್ನು ಕಾಡಿ ಬೇಡಿ, ಕಾಲಿಗೆ ಬಿದ್ದು, ಹಣ ಕೊಟ್ಟು ಖರೀದಿ ಮಾಡಿದರಲ್ಲ, ನಮ್ಮ ಪಕ್ಷದ 13 ಹಾಗೂ ಜೆಡಿಎಸ್ ನ 3 ಸದಸ್ಯರನ್ನು ಕರೆದುಕೊಂಡರಲ್ಲ, ಆಗೇನು ಅವರ ಪಕ್ಷದ ಬಾಗಿಲು ಬಂದ್ ಆಗಿತ್ತಾ? ಅವರಿಗೆ ತಾಕತ್ತಿದ್ದರೆ ಜನಮತದ ಆಧಾರದ ಮೇಲೆ ಗೆಲ್ಲಬೇಕಿತ್ತು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ’ ಎಂದು ಕಿಡಿಕಾರಿದರು.
ಕಾಲವೇ ಉತ್ತರ ನೀಡಲಿದೆ: ಡಿ ಕೆ ಶಿವಕುಮಾರ್ ಭ್ರಷ್ಟಾಚಾರದ ಬ್ರ್ಯಾಂಡ್ ಎಂಬ ಸಚಿವ ಅಶ್ವತ್ಥ ನಾರಾಯಣ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ನನ್ನನ್ನು ಟಾರ್ಗೆಟ್ ಮಾಡಿದರೆ ಅವರಿಗೆ ಮಾರ್ಕೆಟ್ ಇರುತ್ತದೆ’ ಎಂದರು. ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಕಾಲವೇ ಉತ್ತರ ನೀಡಲಿದೆ’ ಎಂದರು.
ಓದಿ: ಪಿಎಂಎಲ್‌ಎ ಪ್ರಕರಣ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ಗೆ ಡಿಕೆಶಿ ಅರ್ಜಿ ಸಲ್ಲಿಕೆ.. ಇಡಿಗೆ ನೋಟಿಸ್