ಬೆಂಗಳೂರು: ಹಾಸನದಲ್ಲಿ ಜೆಡಿಎಸ್ ಟಿಕೆಟ್ಗಾಗಿ ಸಮರ ತಾರಕಕ್ಕೇರಿದ್ದು, ಮಾಜಿ ಸಚಿವ ಹೆಚ್ ಡಿ ರೇವಣ್ಣ ಮಧ್ಯಪ್ರವೇಶದಿಂದ ಸ್ವಲ್ಪಮಟ್ಟಿಗೆ ತಣ್ಣಗಾಗಿದೆ. ಆದರೂ, ಒಳ, ಒಳಗಿನ ಬೇಗುದಿ ಇನ್ನೂ ಆರಿಲ್ಲ ಎಂದು ಹೇಳಲಾಗುತ್ತಿದೆ. ಕೆಲದಿನಗಳ ಹಿಂದೆ ಭವಾನಿ ರೇವಣ್ಣ ಅವರು ಒಂದು ಕಾರ್ಯಕ್ರಮದಲ್ಲಿ ಹಾಸನದ ಟಿಕೆಟ್ ವಿಷಯವಾಗಿ ಹೇಳಿದ ಹೇಳಿಕೆ ಇಷ್ಟೆಲ್ಲ ಗೊಂದಗಳಿಗೆ ಕಾರಣವಾಗಿದೆ.
ಇದರ ಜೊತೆಗೆ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ನೀಡಿದ ಹೇಳಿಕೆಯೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಕಣ್ಣು ಕೆಂಪಾಗಿಸಿದೆ. ಇದರ ಮಧ್ಯೆ ಪರ -ವಿರೋಧದ ಚರ್ಚೆಗಳು ನಡೆದಿವೆ. ಭವಾನಿ ರೇವಣ್ಣ ಪರ-ವಿರೋಧದ ಟ್ವೀಟ್ ಸಹ ಜೋರಾಗಿತ್ತು. ಹಾಸನದಲ್ಲಿ ಭವಾನಿ ಅವರಿಗೆ ಟಿಕೆಟ್ ನೀಡಿದರೆ ಸೋಲು ಖಚಿತ. ಸ್ವರೂಪ್ ಅವರಿಗೆ ಟಿಕೆಟ್ ನೀಡಿದರೆ ಜೆಡಿಎಸ್ ಗೆಲುವು ನಿಶ್ಚಿತ ಎಂಬೆಲ್ಲಾ ಪೋಸ್ಟ್ಗಳು ಹರಿದಾಡಿದ್ದವು. ಹಾಗಾಗಿ, ಪಕ್ಷದ ಕಾರ್ಯಕರ್ತರಲ್ಲೇ ಅಸಮಾಧಾನದ ಹೊಗೆ ಆಡುತ್ತಿದೆ.
ಭವಾನಿ ರೇವಣ್ಣ ಟಿಕೆಟ್ಗಾಗಿ ಪಟ್ಟು: ಬಿಜೆಪಿ ತೆಕ್ಕೆಯಲ್ಲಿರುವ ಹಾಸನ ವಿಧಾನಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಮಾಜಿ ಶಾಸಕ ದಿ ಎಚ್ ಎಸ್ ಪ್ರಕಾಶ್ ಅವರ ಪುತ್ರ ಹೆಚ್ ಪಿ ಸ್ವರೂಪ್ಗೆ ಟಿಕೆಟ್ ನೀಡಲು ಒಲವು ತೋರಿಸಿದ್ದರು. ಭವಾನಿ ರೇವಣ್ಣ ಅವರು ನನ್ನನ್ನೇ ಅಭ್ಯರ್ಥಿ ಮಾಡುತ್ತಾರೆ ಎಂದು ಯಾವಾಗ ಬಹಿರಂಗವಾಗಿ ಸ್ವಯಂ ಘೋಷಣೆ ಮಾಡಿಕೊಂಡರೋ ಅಲ್ಲಿಂದ ಹಾಸನ ಜೆಡಿಎಸ್ ಕ್ಷೇತ್ರದಲ್ಲಿ ಗೊಂದಲ ಏರ್ಪಡಲು ಆರಂಭವಾಯಿತು. ಟಿಕೆಟ್ ಬೇಕೇ ಬೇಕು ಎಂದು ಭವಾನಿ ರೇವಣ್ಣ ಪಟ್ಟು ಹಿಡಿದಿರುವುದರಿಂದ ಕುಟುಂಬ ಕದನ ಭುಗಿಲೇಳುವಂತೆ ಮಾಡಿದೆ. ಆದರೆ, ಇದಕ್ಕೆ ಕುಮಾರಸ್ವಾಮಿ ಅಡ್ಡಿಯಾಗಿರುವುದು ಹೆಚ್ ಡಿ ರೇವಣ್ಣ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.
ಹೆಚ್ಡಿಡಿ ಸಂದೇಶ: ಇದೆಲ್ಲಕ್ಕೂ ಬ್ರೇಕ್ ಹಾಕಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮಧ್ಯಪ್ರವೇಶ ಮಾಡಿದ್ದು, 'ನಾನು ತಿಳಿಸುವವರೆಗೂ ಹಾಸನ ಟಿಕೆಟ್ ಕುರಿತು ಯಾರೂ ಮಾತನಾಡಬಾರದು' ಎಂದು ಮಗ ರೇವಣ್ಣನ ಮೂಲಕ ಗೌಡರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ, ಹೆಚ್ ಡಿ ರೇವಣ್ಣ ಅವರು ಹೊಳೇನರಸೀಪುರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ಟಿಕೆಟ್ ಹಂಚಿಕೆ ಬಗ್ಗೆ ನಾನು ಒಬ್ಬನೇ ತೀರ್ಮಾನ ಮಾಡುವ ಪ್ರಶ್ನೆಯೇ ಇಲ್ಲ. ನಮ್ಮ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವನ್ನು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಹಾಗೂ ರಾಜ್ಯದ ಅಧ್ಯಕ್ಷರಾದ ಇಬ್ರಾಹಿಂ ಅವರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.
ಅದೇ ಅಂತಿಮ. ನಾನು ಕುಮಾರಸ್ವಾಮಿ ಅವರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ ರೇವಣ್ಣಗೆ ಟಿಕೆಟ್ ಕೊಡಿ ಅಂತಿದ್ದಾರೆ. ಇನ್ನು ಕೆಲವರು ಇನ್ನೊಬ್ಬರಿಗೆ ಕೊಡಿ ಎಂದು ಹೇಳುತ್ತಿದ್ದಾರೆ. ಆದರೆ, ಕುಳಿತು ತೀರ್ಮಾನ ಮಾಡುವುದು ಪಕ್ಷ. ಎಲ್ಲರೂ ಕುಳಿತು ಚರ್ಚೆ ಮಾಡಿ ಜನರ ವಿಶ್ವಾಸ, ಸ್ಥಳೀಯರ ಅಭಿಪ್ರಾಯ ಪಡೆದುಕೊಂಡ ನಂತರವೇ ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಟಿಕೆಟ್ ಸಂಘರ್ಷಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಿದ್ದಾರೆ.
ಹೆಚ್ ಪಿ ಸ್ವರೂಪ್ ಚುನಾವಣೆಗೆ ಸಿದ್ಧತೆ: ಕುಮಾರಸ್ವಾಮಿ ಅವರ ವಿರೋಧದ ನಡುವೆಯೂ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಓಡಾಡುತ್ತಿದ್ದರು. ಇನ್ನೊಂದು ಕಡೆ ಟಿಕೆಟ್ ಆಕಾಂಕ್ಷಿ ಹೆಚ್ ಪಿ ಸ್ವರೂಪ್ ಸಹ ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರಚಾರ ಕೈಗೊಂಡಿದ್ದಾರೆ. ನಿತ್ಯ ಆಪ್ತರ ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೋ ಒಂದು ಕಡೆ ಹೆಚ್ ಡಿ ರೇವಣ್ಣ ಅವರನ್ನು ಎದುರು ಹಾಕಿಕೊಂಡು ಚುನಾವಣಾ ಅಖಾಡಕ್ಕೆ ಇಳಿದು ಗೆಲುವು ಸಾಧಿಸುವುದು ಕಷ್ಟ ಎಂಬುದು ಸ್ವರೂಪ್ ಅವರಿಗೆ ಗೊತ್ತಿದೆ.
ಆದರೂ, ಕುಮಾರಸ್ವಾಮಿ ಅವರು ತಮಗೆ ಬೆಂಬಲ ನೀಡುವರು ಎಂಬ ಕಾರಣದಿಂದ ಸಂಘಟನೆಯಲ್ಲಿ ತೊಡಗಿದ್ದಾರೆ. ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ದೇವೇಗೌಡರ ಕುಟುಂಬದ ಸಮರವಾಗಿ ಮಾರ್ಪಟ್ಟಿದೆ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲ. ಹಾಗಾಗಿಯೇ, ರೇವಣ್ಣ ನಡೆ ನಿಗೂಢವಾಗಿದೆ. ಆದರೆ, ದೇವೇಗೌಡರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹೆಚ್‌ಡಿಕೆ: ರೇವಣ್ಣ ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರು, ರಾಯಚೂರು ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಭವಾನಿ ರೇವಣ್ಣ ಮಹಿಳಾ ಶಕ್ತಿ ಎಂದು ಬಣ್ಣಿಸಿದ್ದಾರೆ. ರೇವಣ್ಣ ಮಕ್ಕಳು ಅವರವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ತೀರ್ಮಾನವನ್ನು ನಾವು ಮಾಡುತ್ತೇವೆ. ಹೆಚ್ ಡಿ ರೇವಣ್ಣ ಹೇಳಿದ ಮೇಲೆ ಆಯಿತು. ಭವಾನಿ ಅವರಿಗೆ ಸೂಕ್ತವಾದ ಸಮಯದಲ್ಲಿ ಯಾವ ಸ್ಥಾನಮಾನದಲ್ಲಿ ಕೆಲಸ ಮಾಡಬೇಕು. ಅವರಿಗೆ ಜವಾಬ್ದಾರಿ ಏನು ನೀಡಬೇಕೋ ಅದನ್ನು ನೀಡುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಹೆಚ್‌ಡಿಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಇನ್ನು ಭವಾನಿ ರೇವಣ್ಣ ಶಾಸಕಿ ಆಗಬೇಕೆಂಬ ಆಸೆ ನಿನ್ನೆ ಮೊನ್ನೆಯದ್ದಲ್ಲ. 2013 ರಿಂದಲೂ ಅವರು ಶಾಸಕಿಯಾಗಬೇಕು ಎಂಬ ಕನಸು ಕಾಣುತ್ತಿದ್ದು, ಈ ಚುನಾವಣೆಯಲ್ಲಿ ಭವಾನಿ ಅವರ ಕನಸು ಈಡೇರುವುದೇ? ಎಂಬ ಪ್ರಶ್ನೆ ಎದುರಾಗಿದೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಮೊಮ್ಮಗ ಪ್ರಜ್ವಲ್ ರೇವಣ್ಣರಿಗೆ ಸ್ಥಾನ ಬಿಟ್ಟುಕೊಟ್ಟು ಕೈಹಿಡಿದ್ದಿದ್ದ ದೇವೇಗೌಡರು, ಈ ಚುನಾವಣೆಯಲ್ಲಿ ಸೊಸೆಗೆ ಮಣೆ ಹಾಕುವರೇ? ಎಂಬುದು ಕುತೂಹಲದ ಸಂಗತಿ.
ಈ ಹಿಂದೆಯೂ ಸಹ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಇದೇ ಸವಾಲು ಎದುರಿಸಿದ್ದರು. ತಮ್ಮ ಕಡೇ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಂಡು ತುಮಕೂರಿಗೆ ಹೋಗಿ ನಿಂತರು. ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದರು. ತುಮಕೂರಿನಲ್ಲಿ ದೇವೇಗೌಡರು ಸೋತರು. ಆದರೆ, ಈಗ ಮತ್ತೆ ಸೊಸೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ವಿಚಾರವಾಗಿಯೂ ಗೌಡರು ತೀರ್ಮಾನ ಮಾಡಬೇಕಿದೆ. ಇನ್ನು ಟಿಕೆಟ್ ಆಕಾಂಕ್ಷಿ ಸ್ವರೂಪ್ ಪರನೋ ಅಥವಾ ಸೊಸೆ ಪರ ನಿಲ್ಲುತ್ತಾರಾ ಗೌಡರು ಎಂಬುದಕ್ಕೆ ಕೆಲವೇ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ.
ಇದನ್ನೂ ಓದಿ: ಪಂಚರತ್ನ ರಥಯಾತ್ರೆ: ಪತಿಯ ಚಿಕಿತ್ಸೆಗೆ ಕಣ್ಣೀರಿಟ್ಟ ಮಹಿಳೆಗೆ ಹೆಚ್‌ಡಿಕೆ ನೆರವು; ರಸ್ತೆ ಬದಿ ಟೀ, ಮಂಡಕ್ಕಿ ಸೇವನೆ