ಬೆಂಗಳೂರು : ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಮೂಲಕ ದೇಶಾದ್ಯಂತ ಮೋದಿ ಅಲೆ ಎಬ್ಬಿಸಲು ಬಿಜೆಪಿಗರು ಸಜ್ಜಾಗಿದ್ದರೆ. ಇನ್ನೊಂದೆಡೆ ಜನವರಿ ಅಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಉದ್ಯೋಗ ಮೇಳದ ಮೂಲಕ ಕಾಂಗ್ರೆಸ್ ಪರವಾದ ಅಲೆ ಎಬ್ಬಿಸಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ 29 ಸಂಪುಟದ ಪ್ರಮುಖ ಸಚಿವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಪೂರ್ವಭಾವಿ ಸಭೆ ನಡೆಸಿದ್ದಾರೆ. ಜನವರಿ ಅಂತ್ಯದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಉದ್ಯೋಗ ಮೇಳ ದೇಶದ ಇತಿಹಾಸದಲ್ಲೇ ಇದುವರೆಗೆ ನಡೆಯದ ಅತ್ಯಂತ ದೊಡ್ಡ ಮೇಳವಾಗಬೇಕು ಎಂದು ಬಯಸಿದ್ದಾರೆ ಎನ್ನಲಾಗಿದೆ.
ಈ ಕಾರಣಕ್ಕಾಗಿಯೇ ಸಚಿವರಾದ ಎಂ.ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಶರಣಪ್ರಕಾಶ್ ಪಾಟೀಲ್, ಡಾ.ಎಂ.ಸಿ ಸುಧಾಕರ್, ದಿನೇಶ್ ಗುಂಡೂರಾವ್ ಮತ್ತುಬಿ. ನಾಗೇಂದ್ರ ಅವರಿಗೆ ಉದ್ಯೋಗ ಮೇಳದ ರೂಪುರೇಷೆ ತಯಾರಿಸುವ ಜವಾಬ್ದಾರಿ ನೀಡಿದ್ದರು. ಉನ್ನತ ಮೂಲಗಳ ಪ್ರಕಾರ, ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರು, ನಂತರ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿರುವ ಉದ್ಯೋಗ ಮೇಳಗಳ ಮೂಲಕ ಆರು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಕೊಡಿಸಬಹುದು ಎಂದು ಹಿರಿಯ ಸಚಿವರೊಬ್ಬರು ಮುಖ್ಯಮಂತ್ರಿಗಳಿಗೆ ಪ್ರಾಥಮಿಕ ವರದಿ ನೀಡಿದ್ದಾರೆ.
ರಾಜ್ಯದಲ್ಲಿ ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಸೇರಿ 17 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಮತ್ತು ಕಂಪನಿಗಳಿದ್ದು, ಇವುಗಳಿಗೆ ಅನುಕ್ರಮವಾಗಿ ಇಂತಿಷ್ಟು ಉದ್ಯೋಗಾವಕಾಶಗಳನ್ನು ನೀಡಬೇಕು ಎಂದು ಗುರಿ ನಿಗದಿ ಪಡಿಸಿದರೆ 6 ಲಕ್ಷಕ್ಕೂ ಅಧಿಕ ಮಂದಿಗೆ ತಕ್ಷಣವೇ ಉದ್ಯೋಗಾವಕಾಶ ಕಲ್ಪಿಸಬಹುದು. ಈ ಪೈಕಿ ಬೃಹತ್ ಕೈಗಾರಿಕೆ ಮತ್ತು ಕಂಪನಿಗಳಿಗೆ ಕನಿಷ್ಠ ತಲಾ ನೂರು ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಗುರಿ ನಿಗದಿ ಮಾಡಬೇಕು. ಇದೇ ರೀತಿ ಮಧ್ಯಮ ಗಾತ್ರದ ಕೈಗಾರಿಕೆಗಳು,ಕಂಪನಿಗಳಿಗೆ ಕನಿಷ್ಠ 25 ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂದು ಗುರಿ ನಿಗದಿ ಮಾಡಬೇಕು.
ಸಣ್ಣ ಕೈಗಾರಿಕೆಗಳಿಗೆ ಕನಿಷ್ಠ ಎರಡರಿಂದ ಐದು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಗುರಿ ನಿಗದಿ ಮಾಡಿದರೆ ಒಟ್ಟು 6 ಲಕ್ಷಕ್ಕೂ ಹೆಚ್ಚು ಮಂದಿಗೆ ತಕ್ಷಣವೇ ಉದ್ಯೋಗಾವಕಾಶ ಕಲ್ಪಿಸಬಹುದು. ಒಬ್ಬ ಉದ್ಯೋಗಿ ನಾಲ್ಕು ಮಂದಿಗೆ ಅನ್ನಕ್ಕೆ ಆಸರೆಯಾಗುವುದರಿಂದ ಈ ಪ್ರಮಾಣದ ಉದ್ಯೋಗಗಳ ಮೂಲಕ 25 ಲಕ್ಷ ಮಂದಿಯ ಜೀವನ ನಿರ್ವಹಣೆಗೆ ದಾರಿಯಾಗುತ್ತದೆ ಎಂಬುದು ಸಚಿವರು ನೀಡಿದ ವರದಿಯಲ್ಲಿರುವ ಅಭಿಪ್ರಾಯ.
ಇದೇ ರೀತಿ ಉದ್ಯೋಗ ಮೇಳಗಳಲ್ಲಿ ಆಯಾ ಕೈಗಾರಿಕೆ ಮತ್ತು ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಪಾಲ್ಗೊಂಡರೆ ಸಾಲದು, ಬದಲಿಗೆ ಕೈಗಾರಿಕೆ,ಕಂಪನಿಗಳ ಮುಖ್ಯಸ್ಥರೇ ಭಾಗವಹಿಸಲು ಮನವಿ ಮಾಡಿಕೊಳ್ಳಬೇಕು. ಹೀಗೆ ಎಲ್ಲರ ಸಹಕಾರ ಪಡೆದು ಉದ್ಯೋಗ ಮೇಳಗಳನ್ನು ನಡೆಸಿದರೆ ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಉದ್ಯೋಗ ಮೇಳ ನಡೆಸಿದ ಮತ್ತು ಅತ್ಯಂತ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಿಗುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಸರ್ಕಾರ ಮುಂದಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಉದ್ಘಾಟಿಸುವ ಮೂಲಕ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಎಬ್ಬಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದ್ದರೆ, ಅದಕ್ಕೆ ಪರ್ಯಾಯವಾಗಿ ರೋಟಿ, ಕಪಡಾ ಔರ್ ಮಕಾನ್ ಎಂಬುದು ಕಾಂಗ್ರೆಸ್ನ ನೀತಿ ಎಂದು ದೇಶಕ್ಕೆ ಸಂದೇಶ ರವಾನಿಸಬಹುದು ಎಂಬುದು ಸಚಿವರ ಅಭಿಪ್ರಾಯ. ಒಟ್ಟಾರೆ, ಇದು ಲೋಕಸಭೆ ಚುನಾವಣೆಯಲ್ಲಿ ಅನುಕೂಲವಾಗಬಹುದೆಂಬುದು ಎರಡೂ ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಲೋಕಸಭೆ ಚುನಾವಣೆವರೆಗೆ ಮಾತ್ರ ಗ್ಯಾರಂಟಿಗಳ ಆಯುಷ್ಯ: ವಿಜಯೇಂದ್ರ ಭವಿಷ್ಯ