ಬೆಂಗಳೂರು : ಕೋಟ್ಯಂತರ ಭಾರತೀಯರು ಕಾದು ಕುಳಿತಿರುವ ಚಂದ್ರಯಾನ 3 ಅಂತಿಮ ಘಟ್ಟ ತಲುಪಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಇಡೀ ಭಾರತ ಕಾಯುತ್ತಿದೆ. ಇಪ್ಪತ್ತು ನಿಮಿಷಗಳ ಈ ಇಡೀ ಪ್ರಕ್ರಿಯೆ ಇಸ್ರೋದ ವಿಜ್ಞಾನಿಗಳ ಪಾಲಿಗೆ ಮಹತ್ವದ್ದಾಗಿರಲಿದ್ದು, ನಾಲ್ಕು ಹಂತಗಳಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆ ಜರುಗಲಿದೆ. ಕೊನೆಯ 20 ನಿಮಿಷಗಳ ಆ ನಾಲ್ಕು ಹಂತಗಳು ಹೇಗಿರಲಿವೆ ಎಂಬುದರ ಕುರಿತು ಬಾಹ್ಯಾಕಾಶ ಹಾಗೂ ರಕ್ಷಣಾ ತಜ್ಞರಾದ ಗಿರೀಶ್ ಲಿಂಗಣ್ಣ ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.
ರಫ್ ಬ್ರೇಕಿಂಗ್ ಹಂತ: ವಿಕ್ರಂ ಲ್ಯಾಂಡರ್ ತಾನು ಇಳಿಯಬೇಕಾದ ತಾಣದಿಂದ 30ಕಿ.ಮೀ. ದೂರದ ಕಕ್ಷೆಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಲ್ಯಾಂಡರ್ ಇಳಿಯುವಿಕೆಯ ವೇಗವನ್ನು ಸೆಕೆಂಡಿಗೆ 1.68 ಕಿ.ಮೀ. ನಿಂದ ಆರಂಭಿಸಲಾಗುತ್ತದೆ. 690 ಸೆಕೆಂಡುಗಳವರೆಗೆ ಅಂದರೆ 11.5 ನಿಮಿಷ ಮಾತ್ರವೇ ಈ ಹಂತವಿರುತ್ತದೆ. ಈ ಸಮಯದಲ್ಲಿ ವಿಕ್ರಂ ಲ್ಯಾಂಡರ್ ಅನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗುತ್ತದೆ. ಈ ಹಂತದಲ್ಲಿಯೇ ಚಂದ್ರನ ಮೇಲ್ಮೈಗೆ ಸಮತಲವಾಗಿ ಸುತ್ತುತ್ತಿರುವ ಲ್ಯಾಂಡರ್ ಅನ್ನು ಲಂಬ ಸ್ಥಿತಿಗೆ ತಿರುಗಿಸುತ್ತಾ ಚಂದ್ರನೆಡೆಗೆ ಕೊಂಡೊಯ್ಯಬೇಕು. 690 ಸೆಕೆಂಡುಗಳಲ್ಲಿ ಸಮತಲ ವೇಗವು ಸೆಕೆಂಡಿಗೆ 358 ಮೀ. ಇದ್ದರೆ, ಕೆಳಮುಖದ ಚಲನೆಯ ವೇಗ ಸೆಕೆಂಡಿಗೆ 61 ಮೀ. ಆಗಿರುತ್ತದೆ. ಚಂದ್ರಯಾನ - 2ರಲ್ಲಿ ಇದೇ ಹಂತದಲ್ಲಿಯೇ ಕೊನೆ ಕ್ಷಣದಲ್ಲಿ ಆದ ತಾಂತ್ರಿಕ ದೋಷದಿಂದ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ.
ಎತ್ತರ ನಿಲುಗಡೆ ಹಂತ: ಚಂದ್ರನ ಮೇಲ್ಮೈಗೆ 7.42 ಕಿ.ಮೀ ನಷ್ಟಿದ್ದಾಗ ಲ್ಯಾಂಡರ್ ಈ ಹಂತಕ್ಕೆ ಪ್ರವೇಶಿಸುತ್ತದೆ. ಈ ಹಂತದಲ್ಲೇ ಕೆಲವು ಸೆಕೆಂಡುಗಳು (10 ಸೆಕೆಂಡುಗಳು) ಸ್ಥಿರವಾಗಿ ನಿಂತು ಚಂದ್ರನ ಮೇಲ್ಮೈನ ಫೋಟೋಗಳನ್ನ ವಿಕ್ರಂ ಕ್ಲಿಕ್ಕಿಸಲಿದೆ. ಈ ಸಮಯದಲ್ಲಿ ಸಮತಲ ವೇಗವು ಸೆಕೆಂಡಿಗೆ 336 ಮೀ. ಆಗಿದ್ದರೆ, ಲಂಬ ವೇಗವು ಸೆಕೆಂಡಿಗೆ ಸುಮಾರು 59 ಮೀ ಆಗಿರುತ್ತದೆ.
ಫೈನ್ ಬ್ರೇಕಿಂಗ್ ಹಂತ: ಈ ಹಂತವು 175 ಸೆಕೆಂಡುಗಳವರೆಗೆ ಇರುತ್ತದೆ. ಇದರಲ್ಲಿ ವೇಗವು ಸೊನ್ನೆಗೆ ಇಳಿಯುತ್ತದೆ. ಲ್ಯಾಂಡರ್ ಸ್ಥಾನವು ಸಂಪೂರ್ಣವಾಗಿ ಲಂಬವಾಗಿರುತ್ತದೆ ಮತ್ತು ಚಂದ್ರನ ಮೇಲ್ಮೈನಿಂದ 800 ಮೀ.ನಿಂದ 1300 ಮೀ. ಎತ್ತರದಲ್ಲಿರುತ್ತದೆ. ಈ ಸಂದರ್ಭದಲ್ಲಿ ವಿಕ್ರಂ ತನ್ನ ಸಂವೇದಕಗಳನ್ನು ಸಕ್ರಿಯಗೊಳಿಸುತ್ತದೆ. ಮತ್ತು ಇಲ್ಲಿಯೂ ಸಹ ಚಂದ್ರನ ಮೇಲ್ಮೈ ಫೋಟೋಗಳನ್ನು ವಿಕ್ರಂ ಕ್ಲಿಕ್ಕಿಸುತ್ತದೆ.
ಟರ್ಮಿನಲ್ ಅವರೋಹಣ ಹಂತ: ಈ ಹಂತದಲ್ಲಿ ಲ್ಯಾಂಡರ್ ಚಂದ್ರನ ಮೇಲ್ಮೈನಿಂದ ಕೇವಲ 150ಮೀ ನಷ್ಟು ಎತ್ತರದಲ್ಲಿರುತ್ತದೆ. ಲ್ಯಾಂಡರ್‌ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾ ಚಂದ್ರನ ಮೇಲ್ಮೈ ಚಿತ್ರಗಳನ್ನು ತೆಗೆಯುತ್ತದೆ. ಲ್ಯಾಂಡರ್ ಹಝಾರ್ಡ್ ಡಿಟೆಕ್ಷನ್ ಮತ್ತು ಅವಾಯ್ಡೆನ್ಸ್ ಕ್ಯಾಮೆರಾ (LHDC) ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚುತ್ತದೆ. ಅಂದರೆ, ದೊಡ್ಡ ಕುಳಿಗಳು, ಕಲ್ಲುಗಳಿಲ್ಲದಿರುವ ಪ್ರದೇಶವನ್ನು ಲ್ಯಾಂಡರ್ ಹುಡುಕುತ್ತದೆ. ಎಲ್ಲವೂ ಸರಿಯಾಗಿದ್ದರೆ 73 ಸೆಕೆಂಡುಗಳಲ್ಲಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತದೆ. ಇಲ್ಲವಾದರೆ ಸ್ವಲ್ಪ ದೂರ ತೆರಳಿ ಬೇರೆ ಸ್ಥಳ ಹುಡುಕುತ್ತದೆ ಎಲ್ಲವೂ ಸರಿಯಿದ್ದರಷ್ಟೇ ಇಳಿಯುತ್ತದೆ.
ಲ್ಯಾಂಡಿಂಗ್ ನಂತರದ ಮುಂದೇನು?: ಚಂದ್ರನ ಮೇಲ್ಮೈ ಸಾಕಷ್ಟು ಧೂಳಿನ ಕಣಗಳು, ದೊಡ್ಡ ಕುಳಿ, ಬಂಡೆಗಳನ್ನೊಳಗೊಂಡ ಜಾಗ. ಆದ್ದರಿಂದ ಲ್ಯಾಂಡರ್ ಇಳಿಯುತ್ತಿದ್ದಂತೆ ಆ ಜಾಗದಲ್ಲಿ ಧೂಳು ಆವರಿಸಿಕೊಳ್ಳುತ್ತದೆ. ಬಳಿಕ ವಿಕ್ರಂನಿಂದ ಹೊರಚಾಚುವ ಸ್ಲೈಡರ್, ಪ್ರಗ್ಯಾನ್ ರೋವರ್ ಹೊರಗೆ ಬಂದು ಚಂದ್ರನ ಮೇಲ್ಮೈಗೆ ಪ್ರವೇಶ ನೀಡಲು ನೆರವಾಗಲಿದೆ. ನಂತರದಲ್ಲಿ ವಿಕ್ರಂ ಪ್ರಗ್ಯಾನ್‌ನ ಫೋಟೊಗಳನ್ನು ಮತ್ತು ಪ್ರಗ್ಯಾನ್ ವಿಕ್ರಂನ ಫೋಟೊಗಳನ್ನೂ ತೆಗೆದುಕೊಳ್ಳುವುದರ ಮೂಲಕ ಪ್ರಗ್ಯಾನ್ ರೋವರ್ ತನ್ನ ಕಾರ್ಯ ಆರಂಭಿಸುತ್ತದೆ.
ಇದನ್ನೂ ಓದಿ: ಚಂದ್ರನ ಮೇಲೆ ಲ್ಯಾಂಡರ್ ಕಾಲಿಡುವುದು ಖಂಡಿತ: ಇಸ್ರೋ ಮಾಜಿ ನಿರ್ದೇಶಕ ಸುರೇಂದ್ರಪಾಲ್ ವಿಶ್ವಾಸ