ಬೆಂಗಳೂರು: ಲೋಕಾಯುಕ್ತ ದಾಳಿಯಲ್ಲಿ ನನ್ನನ್ನು ಸಿಲುಕಿಸುವುದಕ್ಕಾಗಿಯೇ ಬಲವಂತವಾಗಿ ಜೇಬಿಗೆ ಹಣ ತುರುಕಿದರು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಸಹಕಾರ ಸಂಘಗಳ ನೋಂದಣಿ ಮಾಡುವುದಕ್ಕಾಗಿ ಲಂಚ ಕೇಳಿದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮಡಿಕೇರಿ ಜಿಲ್ಲೆಯ ಸಹಕಾರ ಸಂಘಗಳ ನೋಂದಣಾಧಿಕಾರಿಗಳ ಕಚೇರಿಯ ನಿರೀಕ್ಷಕ ಎಸ್.ಮಂಜು ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಜೇಂದ್ರ ಬಾದಾಮಿಕರ್ ಅವರ ನ್ಯಾಯಪೀಠಕ್ಕೆ ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಅರ್ಜಿದಾರರಿಗೆ ಲಂಚ ಸ್ವೀಕರಿಸುವ ಉದ್ದೇಶವಿರಲಿಲ್ಲ. ಆದರೆ, ಪ್ರಕರಣದ ದೂರುದಾರರು ಅರ್ಜಿದಾರನನ್ನು ಸಿಲುಕಿಸುವುದಕ್ಕಾಗಿ ಒತ್ತಾಯಪೂರ್ವಕವಾಗಿ ಜೇಬಿಗೆ ಹಣ ತುರುಕಿದರು ಎಂದು ತಿಳಿಸಿದ್ದರು. ಆದರೆ ನ್ಯಾಯಪೀಠ ಜಾಮೀನು ನೀಡಲು ಈ ಅಂಶವನ್ನು ತಿರಸ್ಕರಿಸಿತು. ಹಾಗೆ ಭ್ರಷ್ಟಾಚಾರದ ರೂಪದಲ್ಲಿ ಪಡೆದಿರುವ ಹಣವನ್ನು ದೂರುದಾರರು ಒತ್ತಾಯ ಪೂರ್ವಕವಾಗಿ ನೀಡಿದ್ದಾರೋ ಅಥವಾ ಅರ್ಜಿದಾರರೇ ಸ್ವಯಂಪ್ರೇರಣೆಯಿಂದ ಸ್ವೀಕರಿಸಿದ್ದಾರೆಯೇ ಎಂಬುದನ್ನು ವಿಚಾರಣೆಯ ಮೂಲಕ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಟ್ಟಿದೆ. ಅಲ್ಲದೆ, ಆರೋಪಿ ಈಗಾಗಲೇ 18 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ನ್ಯಾಯಾಂಗ ಬಂಧನದಲ್ಲಿರಬೇಕಾದ ಅಗತ್ಯವಿಲ್ಲ ಎಂದು ತಿಳಿಸಿ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ ಏನು.. ಮಡಿಕೇರಿ, ಕೊಡಗು ಜಿಲ್ಲೆಯ ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ನಿರೀಕ್ಷಕರಾಗಿರುವ ಅರ್ಜಿದಾರ ಎಸ್. ಮಂಜು ಅವರು, ಸಹಕಾರ ಸಂಘದ ನೋಂದಣಿಗೆ ರೂ.10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮನವಿ ಮಾಡಿದ ಬಳಿಕ ಒಂದು ಸಾವಿರ ಕಡಿಮೆ ಮಾಡಿ 9 ಸಾವಿರ ರೂ ಗಳಿಗೆ ಇಳಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈ ಸಂಬಂಧ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ನಡುವೆ ಆರೋಪಿಯ ಸೆರೆಹಿಡಿಯಲು ಬಲೆ ಬೀಸಿದ ಲೊಕಾಯುಕ್ತ ಪೊಲೀಸರು, ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ಶೌಚಾಲಯದಲ್ಲಿ 8 ಸಾವಿರ ರೂ.ನಗದು ಸ್ವೀಕರಿಸುವಾಗ ಸ್ಥಳದಲ್ಲೇ ಮಂಜು ಅವರನ್ನು ಬಂಧಿಸಿದ್ದರು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ರದ್ದು ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ: ಮೊದಲು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಕಾಂಗ್ರೆಸ್ ಕ್ಯಾಂಪೇನ್