ಬೆಂಗಳೂರು: ನಮ್ಮ ರಾಜ್ಯದಲ್ಲಿ ಎಸ್‌ಡಿಪಿಐ,ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡಲು ಕೇಂದ್ರದ ಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐ, ಪಿಎಫ್ಐ, ಕೆಎಫ್ಡಿ ಸಂಘಟನೆಯಿಂದ ಬಿಜೆಪಿ,ಆರ್ಎಸ್ಎಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನೇ ಗೃಹ ಮಂತ್ರಿ ಆದಾಗ ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ. ಕೂಡಲೇ ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದರು. ಚಾಮರಾಜನಗರದಲ್ಲಿ ಉಗ್ರರು ತರಬೇತಿ ಪಡೆಯಲು ಜಾಗ ಹುಡುಕುತ್ತಿರುವ ಮಾಹಿತಿ ಬಂದಿದೆ. ಈ ಸಂಬಂಧ ಚಾಮರಾಜನಗರ ಡಿಸಿಗೆ ವರದಿ ಕೇಳಿದ್ದೇನೆ. ವರದಿ ಬಂದ ಬಳಿಕ ಸಿಎಂ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುತ್ತೇವೆ. ಬೇರೆ ರಾಜ್ಯದಲ್ಲಿ ಇಂತಹ ಸಂಘಟನೆ ಬ್ಯಾನ್ ಮಾಡೋ ಕೂಗು ಕೇಳಿ ಬಂದಿದೆ ಎಂದರು.
ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ: ಸಾಕಷ್ಟು ಜನರನ್ನು ಈ ಸಂಘಟನೆಗಳು ಬಲಿ ತೆಗೆದು ಕೊಂಡಿವೆ. ಉಗ್ರಗಾಮಿ ಚಟುವಟಿಕೆಗಳನ್ನು ಈ ಸಂಘಟನೆ ಮಾಡುತ್ತಿದೆ. ಈ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂತಹ ಸಂಘಟನೆ ಮೇಲೆ ನಿರಂತರ ನಿಗಾ ಇಡಬೇಕು. ಅಮಾಯಕರನ್ನು ಪ್ರಚೋದನೆ ಮಾಡಿ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದಾರೆ. ಸೌಹಾರ್ದತೆ, ಪ್ರೀತಿ-ವಿಶ್ವಾಸದ ಮುಂದೆ ಯಾವುದೂ ದೊಡ್ಡದಲ್ಲ. ಯಾರೇ ಅಮಾಯಕರು ಇಂತಹ ಕೆಲಸದಲ್ಲಿ ತೊಡಗಿದ್ದರೆ, ಅವರು ವಾಪಸ್ ಬರಬೇಕು. ಇಂತಹ ಸಂಘಟನೆಗಳ ಕೃತ್ಯ ತಡೆಯಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದರು.