ಬೆಂಗಳೂರು: ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಬಹುಮತದ ಬಗ್ಗೆ ನಾನು ಏನು ಮಾತಾಡಲ್ಲ. ಯಡಿಯೂರಪ್ಪರ ಪ್ರಮಾಣ ವಚನ ಸ್ವೀಕಾರಕ್ಕೆ ಸದ್ಯಕ್ಕೆ ತೊಂದರೆ ಇಲ್ಲ. ಪ್ರಮಾಣ ವಚನ ಸ್ವೀಕಾರ ಮಾಡಲಿ, ಬಳಿಕ ಬಹುಮತ ಸಾಬೀತು ಪಡಿಸುತ್ತಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಈ ಬಗ್ಗೆ ನಗರದ ಜೆ.ಪಿ.ಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಹುಶಃ ಸೋಮವಾರ ಅಥವಾ ಮಂಗಳವಾರ ಬಹುಮತ ಸಾಬೀತು ಪಡಿಸಬಹುದು. ಜುಲೈ 31 ರೊಳಗೆ ಹಣಕಾಸು ಮಸೂದೆ ಮಂಡನೆ ಮಾಡಬೇಕು. ಬಹುಶಃ ಇರುವ ಸ್ಪೀಕರ್ ಅವರೇ ಮುಂದುವರೆಯಬಹುದು ಎಂದು ದೇವೆಗೌಡರು ಅಭಿಪ್ರಾಯಪಟ್ಟರು.
ಸದ್ಯಕ್ಕೆ ಯಾವ ವಿಚಾರವೂ ನನಗೆ ಗೊತ್ತಿಲ್ಲ. ಪ್ರಮಾಣ ವಚನ ಸ್ವೀಕಾರ ಮಾಡುತ್ತಿರೋದು ಮಾತ್ರ ಗೊತ್ತು. ಅದನ್ನು ಬಿಟ್ಟು ಬೇರೆ ಯಾವ ವಿಚಾರಕ್ಕೂ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.