ಬೆಂಗಳೂರು: ಕೊರೊನಾ ಬಗ್ಗೆ ಭೀತಿಗೊಂಡಿರುವವರಿಗೆ, ಕೊರೊನಾದಿಂದ ಗುಣಮುಖರಾದ ರೋಗಿಯೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಂಡಿಯನ್ ಆರ್ಮಿಯಲ್ಲಿ ಟೆಕ್ನಿಷಿಯನ್ ಆಗಿರುವ ಆದಿತ್ಯ ಗಣೇಶಯ್ಯ ಎಂಬುವವರು ಕೊರೊನಾ ಗೆದ್ದು, ಇದೀಗ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಪತ್ನಿ-ಮಗಳಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಆದರೆ ಉತ್ತಮ ರೀತಿಯ ಚಿಕಿತ್ಸೆ ದೊರೆತು ಗುಣಮುಖರಾಗಿದ್ದೇವೆ. ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಅಲ್ಲಿ ಎಲ್ಲ ಸೌಲಭ್ಯಗಳನ್ನೂ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮೊದಲು ಪತ್ನಿಗೆ ಜ್ವರ, ಕೆಮ್ಮು, ಮೈ-ಕೈ ನೋವಿತ್ತು. ನಂತರ ನಾನು ಕಚೇರಿಗೆ ರಜೆ ಹಾಕಿದ್ದೆ. ಒಂದು ದಿನದಲ್ಲಿ ನನಗೂ ಜ್ವರ ಬಂತು. 15ನೇ ತಾರೀಕಿನಂದು ಕೋರಮಂಗಲದ ಸರ್ಕಾರಿ ಫೀವರ್ ಕ್ಲಿನಿಕ್ನಲ್ಲಿ ಟೆಸ್ಟ್ ಮಾಡಿಸಿ, ಐಎಲ್ಐ ರೋಗಲಕ್ಷಣ ಇರುವುದರಿಂದ ಔಷಧಿ ಪಡೆದು ಮನೆಗೆ ಬಂದೆವು. ಬಳಿಕ 17 ರಂದು ಮಗಳಿಗೂ ಜ್ವರ ಕಾಣಿಸಿಕೊಂಡಿತು.
18ರಂದು ಮನೆ ಬಳಿ ಆಶಾ ಕಾರ್ಯಕರ್ತೆಯರು ಬಂದು ಆಸ್ಪತ್ರೆಗೆ ದಾಖಲಿಸಲು ಹೇಳಿದರು. ಸಂಜೆ ವೇಳೆಗೆ ಆಂಬ್ಯುಲೆನ್ಸ್ ಬಂತು. ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಯ ಎರಡನೇ ಮಹಡಿಯ ವಾರ್ಡ್ನಲ್ಲಿ ದಾಖಲಿಸಿದರು ಎಂದು ತಮ್ಮ ಅನುಭವ ಹಂಚಿಕೊಂಡರು.
ಆಸ್ಪತ್ರೆಯವರು ಎಲ್ಲ ಅಗತ್ಯ ವಸ್ತುಗಳನ್ನೂ ನೀಡಿದ್ದಾರೆ. ನಿತ್ಯ ಹಣ್ಣು, ರಾಗಿ, ರವೆ ಗಂಜಿ, 5 ತರಹದ ಮಾತ್ರೆಗಳನ್ನು ಕೊಡುತ್ತಿದ್ದರು. ಈಗ ವಾಪಸು ಬಂದು, 14 ದಿನದ ಹೋಂ ಕ್ವಾರಂಟೈನ್ ಕೂಡಾ ಮುಗಿದಿದೆ ಎಂದು ತಿಳಿಸಿದರು. ಒಟ್ಟಿನಲ್ಲಿ ಉಸಿರಾಟದ ಸಮಸ್ಯೆ ಬರುವವರೆಗೂ ಮನೆಯಲ್ಲಿ ಇರದೆ, ರೋಗಲಕ್ಷಣ ಬಂದ ಕೂಡಲೇ ಟೆಸ್ಟ್ ಮಾಡಿಸಿ ಚಿಕಿತ್ಸೆ ಪಡೆಯಿರಿ. ಅಕ್ಕಪಕ್ಕದ ಮನೆಯವರು ಏನೆಂದುಕೊಳ್ತಾರೋ ಎಂದು ತಲೆಕೆಡಿಸಿಕೊಳ್ಳಬೇಡಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.