ಬೆಂಗಳೂರು: ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬೆಳಗಾವಿ ಗಡಿ ವಿಚಾರದ ಬಗ್ಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಗಡಿ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ಹೇಳಿದರು.
ಗಡಿ ವಿಚಾರದಲ್ಲಿ ನಮ್ಮ ಹಿತವನ್ನು ನಾವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಮ್ಮ ರಾಜ್ಯದ ಹಿತ ನಮಗೆ ಮೊದಲು. ನಮ್ಮ ನೆಲ, ಜಲ, ಭಾಷೆಯ ಪ್ರಶ್ನೆ ಬಂದಾಗ ಯಾವುದೇ ರಾಜಿಯಿರದು ಎಂದರು.
ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿರುವ ವಿಚಾರ ಗೊತ್ತಿಲ್ಲ. ಆದರೆ ನಮಗೆ ನಮ್ಮ ರಾಜ್ಯದ ಹಿತವೇ ಮುಖ್ಯ, ಆ ನಿಟ್ಟಿನಲ್ಲೇ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಹಾಲಿ ಕೆಲ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಟಿಕೆಟ್ ಹಂಚಿಕೆಗೆ ಇನ್ನೂ ಸಾಕಷ್ಟು ಸಮಯ ಇದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಯಡಿಯೂರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎನ್ನುವ ವಿಚಾರದ ಕುರಿತು, ನಾನು ಎಲ್ಲಿಯೂ ಹೋಗಿಲ್ಲ, ಇಲ್ಲೇ ಇದ್ದೇನೆ. ಈಗಾಗಲೇ ರಾಜ್ಯದ ಪ್ರವಾಸ ಮಾಡ್ಡುತ್ತಿದ್ದೇನೆ. ಶಕ್ತಿಮೀರಿ ಸಂಘಟನೆ ಮಾಡ್ತಾ ಇದ್ದೇವೆ. ಹಗಲು ರಾತ್ರಿ ಎನ್ನದೆ ರಾಜ್ಯದ ಪ್ರವಾಸ ಮಾಡುತ್ತಿದ್ದೇವೆ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಿದ್ದೇವೆ ಎಂದರು.
ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ತಿಂಗಳಿಗೊಮ್ಮೆ ರಾಜ್ಯದ ಪ್ರಚಾರಕ್ಕೆ ಬರುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಆದರೆ ನಾವು ಪ್ರಧಾನಿ ಮೋದಿಯವರಿಗೆ ತಿಂಗಳಿಗೆ ಎರಡು ಬಾರಿ ಆದರೂ ರಾಜ್ಯಕ್ಕೆ ಬನ್ನಿ ಅಂತ ಕೇಳಿಕೊಂಡಿದ್ದೇವೆ. ಮೋದಿ ಜೊತೆ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಕೂಡ ರಾಜ್ಯಕ್ಕೆ ಬರಲಿದ್ದಾರೆ ಎಂದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಷಯ ನನಗೆ ಗೊತ್ತಿಲ್ಲ. ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಗುಜರಾತ್ ಫಲಿತಾಂಶ ದೊಡ್ಡ ಸ್ಫೂರ್ತಿ, ರಾಜ್ಯದಲ್ಲೂ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿಗೇ ಅಧಿಕಾರ: ಬಿಎಸ್‌ವೈ