ಬೆಂಗಳೂರು: ವಾರಾಂತ್ಯದಲ್ಲಿ ಜನಜಂಗುಳಿಯಿಂದ ಕಳೆಗಟ್ಟುವ ರಾಜಧಾನಿ ಬೆಂಗಳೂರು ಇನ್ಮುಂದೆ ಜನರಿಲ್ಲದೆ ಬಿಕೋ ಎನ್ನಲಿದೆ. ಒಮಿಕ್ರಾನ್ ಆರ್ಭಟದಿಂದ ನಗರದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಆರಂಭವಾಗುವ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತವಾಗಲಿದೆ.
ಸದ್ಯಕ್ಕೆ ನಗರದಲ್ಲಿ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಕೂಡಾ ಜನವರಿ 19ರ ವರೆಗೆ ಮುಂದುವರಿಯಲಿದ್ದು, ವೀಕೆಂಡ್ ಕರ್ಫ್ಯೂ ಮತ್ತಷ್ಟು ಉದ್ಯಮಗಳಿಗೆ, ಮಾಲ್, ಥಿಯೇಟರ್, ಶಾಪಿಂಗ್ ಸ್ಟ್ರೀಟ್ ಗಳಿಗೆ ನಷ್ಟ ತಂದೊಡ್ಡಲಿದೆ.
ನಗರದಲ್ಲಿ ಏನಿರುತ್ತೆ- ಏನಿರೋದಿಲ್ಲ?
- ಆಹಾರ ಧಾನ್ಯ, ಹಾಲು, ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಡೇರಿ ಉತ್ಪನ್ನ ಮಾರಾಟಕ್ಕೆ ಅವಕಾಶ.
- ಬೀದಿಬದಿ ವ್ಯಾಪಾರ, ನ್ಯಾಯಬೆಲೆ ಅಂಗಡಿ, ಪಶು ಆಹಾರ ಮಾರಾಟ ಕೇಂದ್ರಕ್ಕೆ ಅವಕಾಶ.
- ಎಲ್ಲಾ ಸಾರ್ವಜನಿಕ ಉದ್ಯಾನಗಳು ಬಂದ್ ಇರಲಿದ್ದು, ಫಿಟ್ನೆಸ್ ಪ್ರಿಯರಿಗೆ ಕೊಂಚ ತೊಡಕಾಗಿದೆ.
- ಐಟಿ ಸೇರಿದಂತೆ ಎಲ್ಲ ಬಗೆಯ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅವಕಾಶ ಕೊಟ್ಟಿರುವುದರಿಂದ ನೌಕರರ ಓಡಾಟ ಇರಲಿದೆ. ಐಡಿ ಕಾರ್ಡ್ ಜೊತೆಗೆ ಇಟ್ಟುಕೊಂಡು ನಮ್ಮ ಮೆಟ್ರೋ, ಬಿಎಂಟಿಸಿ ಹಾಗೂ ಖಾಸಗಿ ವಾಹನಗಳಲ್ಲಿ ಸಂಚಾರ ಮಾಡಬಹುದಾಗಿದೆ.
- ರೋಗಿಗಳು ಹಾಗೂ ಸಹಾಯಕರು ಕನಿಷ್ಠ ದಾಖಲೆ ಪ್ರದರ್ಶಿಸಿ ಸಂಚರಿಸಬಹುದು.
- ಆಹಾರ ವಿತರಣೆ ಸೇರಿದಂತೆ ಇ-ಕಾಮರ್ಸ್ ಸೇವೆಯನ್ನು ದಿನದ 24 ಗಂಟೆಯೂ ಒದಗಿಸಲು ಅವಕಾಶ
- ನಗರದಲ್ಲಿ ಸಾಕಷ್ಟು ಜನ ಉದ್ಯೋಗಿಗಳು ಹೊರಗಿನ ಆಹಾರಕ್ಕೆ ಅವಲಂಬಿತರಾಗಿದ್ದು, ರೆಸ್ಟೋರೆಂಟ್, ತಿಂಡಿ-ತಿನಿಸು ಮಾರಾಟ ಕೇಂದ್ರಗಳಿಂದ ಪಾರ್ಸೆಲ್ ಗೆ ಅನುಮತಿ ನೀಡಲಾಗಿದೆ.
- ಬೇರೆ ಬೇರೆ ಊರುಗಳಿಗೆ ಸಂಚರಿಸುವವರಿಗೆ ಅವಕಾಶ ಇರಲಿದ್ದು, ರೈಲು ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಹೋಗಿ ಬರಲು ಟಿಕೆಟ್ ಪ್ರದರ್ಶಿಸಿ ಓಡಾಡಬಹುದು.
ಈ ಅತ್ಯಗತ್ಯ ಓಡಾಟಗಳನ್ನು ಹೊರತುಪಡಿಸಿ ಅನಗತ್ಯವಾಗಿ ರಸ್ತೆಗಿಳಿದ್ರೆ ವಾಹನಗಳು ಸೀಜ್ ಆಗಲಿವೆ. ನಗರದಾದ್ಯಂತ ಪೊಲೀಸ್ ಸರ್ಪಗಾವಲು, ರಸ್ತೆಗಳ ತಡೆ ಇರಲಿವೆ. ಹೀಗಾಗಿ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಬೀಳಲಿದ್ದು, ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಾಗಲಿದೆ.