ಬೆಂಗಳೂರು: ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗವು ರಾಜ್ಯದಲ್ಲಿನ ಮುಂದಿನ ಕೆಲ ದಿನಗಳ ಹವಾಮಾನ ಮುನ್ಸೂಚನೆ ನೀಡಿದೆ.
ಆಗಸ್ಟ್ 28 ರಿಂದ ಸಪ್ಟೆಂಬರ್ 3 ರವರೆಗೆ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಬಹುದು. ದಕ್ಷಿಣ ಒಳನಾಡಿನಲ್ಲಿ ಮಳೆ ಸಾಮಾನ್ಯಮಟ್ಟದಲ್ಲಿ ಆಗಬಹುದು. ಆದರೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆ ಆಗಲಿದೆ ಎಂದು ಹವಾಮಾನ ಮುನ್ಸೂಚನೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದರು.
ಸಪ್ಟೆಂಬರ್ 4 ರಿಂದ 10 ರವರೆಗೆ ದಕ್ಷಿಣ ಒಳನಾಡಿನಲ್ಲಿ ಮಳೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಲಿದೆ. ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿರಲಿದೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಇನ್ನೂ ಕಳೆದ ವಾರದ ಮಳೆ ಪ್ರಮಾಣ ಗಮನಿಸಿದ್ರೆ, ತಮಿಳುನಾಡು ಕರಾವಳಿಯಲ್ಲಿ ಟ್ರಫ್ ನಿರ್ಮಾಣವಾದ್ದರಿಂದ ಕೋಲಾರ, ಬೆಂಗಳೂರು ಸುತ್ತ-ಮುತ್ತ ಮಳೆಯಾಯಿತು.
ಈಶಾನ್ಯ ಅರಬ್ಬೀ ಸಮುದ್ರಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತವಾದ ಕಾರಣ ಆಗಸ್ಟ್ 21 ರಿಂದ 23 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮಾನ್ಸೂನ್ ಚುರುಕಾಗಿದ್ದು, 25-26 ರ ನಂತರ ದುರ್ಬಲವಾಯಿತು ಎಂದು ತಿಳಿಸಿದರು.
ಉತ್ತರ ಒಳನಾಡಿನಲ್ಲಿ 21ನೇ ತಾರೀಕಿನಂದು ಮಾನ್ಸೂನ್ ಚುರುಕಾಗಿದ್ದು, 24-26 ರಿಂದ ಮಳೆಯ ಪ್ರಮಾಣ ತಗ್ಗಿದೆ. ದಕ್ಷಿಣ ಒಳನಾಡಿನಲ್ಲಿ ಕೂಡಾ 20-25-26 ರಂದು ಮಾನ್ಸೂನ್ ದುರ್ಬಲಗೊಂಡಿತ್ತು.
ಈ ಅವಧಿಯಲ್ಲಿ ಗೇರುಸೊಪ್ಪ, ಆಗುಂಬೆ, ಕದ್ರದಲ್ಲಿ ಉತ್ತಮ ಮಳೆಯಾಗಿತ್ತು.
ಕಳೆದ ವಾರ ದಕ್ಷಿಣ ಒಳನಾಡಿನಲ್ಲಿ 48% ಮಳೆ ಪ್ರಮಾಣ ಕಡಿಮೆಯಾಗಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಮಳೆ ಪ್ರಮಾಣ ಸಾಧಾರಣವಾಗಿದೆ ಎಂದರು.
ಜೂನ್ ಒಂದರಿಂದ ಆಗಸ್ಟ್ 26 ರವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.