ಬೆಂಗಳೂರು: ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದೆ. ಆಷಾಢ ಮಾಸವಾಗಿದ್ದು ಗಾಳಿ ಹೆಚ್ಚಿದೆ. ಹಲವು ಜಿಲ್ಲೆಗಳಲ್ಲಿ ಬಿಟ್ಟೂ ಬಿಟ್ಟು ಮಳೆಯಾಗುತ್ತಿದೆ. ಒಂದಿನ ಮಳೆಯಾದರೆ, ಮತ್ತೊಂದಿನ ಮಳೆ ಬಿಡುವು ಕೊಡುತ್ತಿದೆ.
ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುತ್ತಿದ್ದು, ಮುಂದಿನ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮುಂದಿನ 24 ಗಂಟೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ರಾಯಚೂರು ಮತ್ತಿತರೆಡೆ ಮಳೆ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಕನ್ನಡ ಜಿಲ್ಲೆಗಳಲ್ಲಿ ಜುಲೈ 3ರವರೆಗೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಸವಕಲ್ಯಾಣ, ಮಂಗಳೂರು, ಕುಂದಾಪುರ, ಅಂಕೋಲಾ, ಕ್ಯಾಸಲ್ರಾಕ್, ಕೊಟ್ಟಿಗೆಹಾರ, ಉಡುಪಿ, ಕಾರ್ಕಳ, ಕಾರವಾರ, ಗುಂಜಿ, ಪುತ್ತೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಸಿದ್ದಾಪುರ, ಹೊನ್ನಾವರ, ಗೋಕರ್ಣ, ಕಲಘಟಗಿ, ಭಾಲ್ಕಿ, ಸಕಲೇಶಪುರದಲ್ಲಿ ಮಳೆಯಾಗಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಮಳೆಯಾಗುವ ನಿರೀಕ್ಷೆ ಇದೆ.
ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತ: ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದ್ದರೂ ಸರಿಯಾದ ಸಮಯಕ್ಕೆ ಮಳೆ ಬರುತ್ತಿಲ್ಲ. ದಿನದಲ್ಲಿ ಬೀಳುವ ಮಳೆ ಗಂಟೆಗೆ, ವಾರಕ್ಕೆ ಬೀಳುವ ಮಳೆ ದಿನಕ್ಕೆ, ತಿಂಗಳಲ್ಲಿ ಬೀಳುವ ಮಳೆ ವಾರದಲ್ಲಿ ಬೀಳುವಂತಾಗಿದೆ. ಇದಕ್ಕೆ ಹವಾಮಾನ ವೈಪರೀತ್ಯ ಪ್ರಮುಖ ಕಾರಣವೆಂದು ತಜ್ಞರು ಹೇಳುತ್ತಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಹಾಗೂ 2022ರ ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. 2021ರ ಜೂನ್‌ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಬಂದಿದೆ. ಆದರೆ, ಮೂರು ವರ್ಷಗಳಿಂದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗುತ್ತಿದೆ.
ರಾಜ್ಯದಲ್ಲಿ ಪ್ರತಿ ವರ್ಷದ ವಾಡಿಕೆಯಂತೆ ಈ ವೇಳೆಗೆ 167 ಮಿ. ಮೀ. ಮಳೆ ಆಗಬೇಕಾಗಿತ್ತು. ಆದರೆ, 66 ಮಿ.ಮೀ. ಮಾತ್ರ ಆಗಿದ್ದು, ಶೇ. 58ರಷ್ಟು ಕಡಿಮೆ ಮಳೆಯಾಗಿದೆ. ಜೊತೆಗೆ ಶೇ. 82ರಷ್ಟು ಬಿತ್ತನೆಯೂ ಕಡಿಮೆ ಆಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯ ಪ್ರಕಾರ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ.59ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆಯ ಪ್ರಮಾಣ 175 ಮಿ.ಮೀ. ಇದ್ದು, ಕೇವಲ 71 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ.
ಹವಾಮಾನ ತಜ್ಞರ ಪ್ರಕಾರ, ಜುಲೈ 5 ರವರೆಗೆ ಮುಂಗಾರು ಮಳೆಗೆ ಅವಕಾಶವಿದೆ. ಹೀಗಾಗಿ ಇನ್ನೂ ಒಂದು ವಾರ ಅವಕಾಶವಿದೆ. ವಾಡಿಕೆಯಂತೆ ಇಷ್ಟೊತ್ತಿಗೆ 82 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಾಗಿತ್ತು. ಆದರೆ, 10.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಚಂಡಮಾರುತ ಇದ್ದರೂ ಮಳೆಯಾಗಿಲ್ಲ. ಮಳೆ ಶುರುವಾಗಿದ್ದರೂ ರಾಜ್ಯಾದ್ಯಂತ ವಿಸ್ತರಣೆಯಾಗಿಲ್ಲ. ಮಳೆ ಬಾರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎಲ್ಲ ಜಿಲ್ಲೆಗಳಲ್ಲಿ ಮಳೆ ಕೊರತೆಯಿದೆ. ಯಾವುದೇ ಸುಧಾರಣೆಯಾಗದಿದ್ದರೆ ಜುಲೈ ಮೊದಲ ವಾರದಲ್ಲಿ ಬರ ಘೋಷಿಸುವ ಸಾಧ್ಯತೆಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆತಂಕಕ್ಕೆ ಒಳಗಾಗಿದ್ದು, ಜುಲೈ ಮೊದಲ ವಾರದಲ್ಲಿ ಬರಗಾಲ ಘೋಷಣೆ ಮಾಡಬೇಕಾ? ಅಥವಾ ಬೇಡವಾ? ಎಂದು ತೀರ್ಮಾನ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ʼಕಾಸಿಗಾಗಿ ಪೋಸ್ಟಿಂಗ್' ಎಂದು ಹೆಚ್ಡಿಕೆ ಟೀಕೆ.. ರಾಮಲಿಂಗಾರೆಡ್ಡಿ ತಿರುಗೇಟು!