ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಇದೇ ತಿಂಗಳು ಡಿಸೆಂಬರ್ 22 ಮತ್ತು 27 ರಂದು 5,762 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. ಈ ಹಿನ್ನೆಲೆ ಈಗಾಗಲೇ ಬಿಜೆಪಿ ಚುನಾವಣಾ ಸಿದ್ಧತೆ ಆರಂಭಿಸಿದ್ದು, ಹೆಚ್ಚಿನ ಸ್ಥಾನ ತಾನೇ ಗೆಲ್ಲುತ್ತೇನೆ ಎಂದು ಹೇಳಿಕೊಂಡಿದೆ. ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ತೆರವಾಗಿರುವ 5,262 ಸ್ಥಾನಗಳಿಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಅತ್ಯುತ್ತಮ ಫಲಿತಾಂಶ ಸಾಧಿಸಿತ್ತು. ಅಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದ ಕಾರಣ ಗೆಲುವು ಅಷ್ಟೊಂದು ಕಷ್ಟಕರವಾಗಿರಲಿಲ್ಲ. ಆದರೆ ಈಗ ಸಾಲುಸಾಲು ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗೆ ಗ್ರಾಮ ಪಂಚಾಯತ್ ಚುನಾವಣೆ ಕೈ ವಶಮಾಡಿಕೊಳ್ಳುವುದು ಅತ್ಯಂತ ಪ್ರತಿಷ್ಠೆಯ ಹಾಗೂ ಅನಿವಾರ್ಯವಾಗಿ ಪರಿಣಮಿಸಿದೆ.
ಹಂತಹಂತವಾಗಿ ರಾಜ್ಯ ರಾಜಕೀಯದ ಹಿಡಿತ ಕಳೆದುಕೊಳ್ಳುತ್ತಾ ಸಾಗಿರುವ ಕಾಂಗ್ರೆಸ್ಗೆ ಗ್ರಾಮ ಪಂಚಾಯತ್ ಚುನಾವಣೆ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದಾಗಿ ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಡರ್ ಮಟ್ಟದಿಂದ ಪಕ್ಷವನ್ನು ಕಟ್ಟಿಸುತ್ತೇನೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಕಾಂಗ್ರೆಸ್ ಆಶಯ ಈಡೇರಿಸಿಕೊಳ್ಳಲು ಪೂರ್ವಕವಾಗಿ ಲಭಿಸಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆ ನಡೆಸಬೇಕೆಂದು ಹೈ ಕೋರ್ಟ್ ಮೆಟ್ಟಿಲೇರಿ ಹೋರಾಟ ನಡೆಸಿದ್ದ ಕಾಂಗ್ರೆಸ್ ಚುನಾವಣೆ ಘೋಷಣೆಗೂ ಮುನ್ನ ಹಾಗೂ ನಂತರದ ಒಂದೆರಡು ದಿನಗಳಲ್ಲಿ ಯಾವುದೇ ಚಟುವಟಿಕೆ ನಡೆಸದಿರುವುದು ಅಚ್ಚರಿ ಮೂಡಿಸಿತ್ತು. ಆದರೆ ಇದೀಗ ತಾವು ಗ್ರಾಮ ಪಂಚಾಯತ್ ಚುನಾವಣೆ ಗೆಲುವಿಗೆ ಸಾಕಷ್ಟು ಕಾರ್ಯತಂತ್ರ ರೂಪಿಸುತ್ತಿರುವುದಾಗಿ ಪಕ್ಷದ ನಾಯಕರು ತಿಳಿಸಿದ್ದಾರೆ.
ಚುನಾವಣೆ ನಮ್ಮ ಹೋರಾಟದ ಫಲ ವಿಧಾನಪರಿಷತ್ ಹಿರಿಯ ಸದಸ್ಯ ಕೆ ಸಿ ಕೊಂಡಯ್ಯ ನೇತೃತ್ವದಲ್ಲಿ ನಾವು ಹೈಕೋರ್ಟ್ ನಲ್ಲಿ ನಡೆಸಿದ ಹೋರಾಟದ ಫಲವಾಗಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿದೆ. ಅತ್ಯಂತ ಸಮರ್ಥವಾಗಿ ನಾವು ಈ ಚುನಾವಣೆಯನ್ನು ಎದುರಿಸುತ್ತೇವೆ. ಸರ್ಕಾರಕ್ಕೆ ಈ ಚುನಾವಣೆ ನಡೆಸಲು ಮನಸ್ಸಿರಲಿಲ್ಲ. ನಮ್ಮ ಹೋರಾಟದ ಫಲವಾಗಿಯೇ ಈ ಚುನಾವಣೆ ಘೋಷಣೆಯಾಗಿದೆ. ಇದರಿಂದ ಈ ಚುನಾವಣೆ ಗೆಲ್ಲಲು ನಾವು ಸಾಕಷ್ಟು ಸಿದ್ಧತೆ ನಡೆಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಈಟಿವಿ ಭಾರತಗೆ ತಿಳಿಸಿದ್ದಾರೆ.
ಓದಿ:ಕಾರ್ ಮೇಲೆ ಉರುಳಿ ಬಿದ್ದ ಮರಳು ಲಾರಿ: ಸ್ಥಳದಲ್ಲೇ 6 ಜನ ಸಾವು!
ನಾವು ಈಗಾಗಲೇ ಈ ಚುನಾವಣೆಗೆ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ಸೂಚನೆ ನೀಡಿದ್ದೇವೆ. ಚುನಾವಣೆ ಎದುರಿಸಲು ಸಿದ್ಧತೆ ಆರಂಭಿಸಿದ್ದು ಪಕ್ಷದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ. ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಕಾರ್ಯಾಚರಣೆ ಆರಂಭಿಸಿದ್ದು, ಕೊರೊನಾ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವೇ ಇವರ ಸಾಧನೆಯಾಗಿ ಕಂಡುಬಂದಿದೆ. ರೈತರು, ಜನಸಾಮಾನ್ಯರು ಕಾರ್ಮಿಕರ ಪರವಾಗಿ ಸರ್ಕಾರ ಯಾವುದೇ ಉತ್ತಮ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಇದರ ಜೊತೆಗೆ ರೈತ ವಿರೋಧಿ ಶಾಸನ ವಾದ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದೊಂದು ರೈತರ ಮರಣ ಶಾಸನವಾಗಿದ್ದು ಇದನ್ನು ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಪ್ರಯತ್ನದ ಮೂಲಕ ಸರ್ಕಾರದ ಜನವಿರೋಧಿ ನೀತಿಯನ್ನು ನಮ್ಮ ಗೆಲುವಿನ ಅಸ್ತ್ರವಾಗಿಸಿಕೊಳ್ಳುತ್ತೇವೆ ಎಂದು ಸಲೀಂ ಅಹಮದ್ ತಮ್ಮ ಪಕ್ಷದ ಕಾರ್ಯತಂತ್ರದ ಕುರಿತು ವಿವರಿಸಿದ್ದಾರೆ.
ಶೇ.70ರಷ್ಟು ಗೆಲುವು ನಮ್ಮದೇ: ಶೇ.70 ರಷ್ಟು ಗೆಲುವು ಬಿಜೆಪಿಯದ್ದಲ್ಲ, ನಮ್ಮದಾಗಲಿದೆ. ಕಳೆದ ಚುನಾವಣೆಯಲ್ಲಿ ನಾವು ಅತ್ಯುತ್ತಮ ಸಾಧನೆಯನ್ನು ತೋರಿಸಿ ಶೇ.70ರಷ್ಟು ಗೆಲುವು ಪಡೆದಿದ್ದೆವು. ಈ ಬಾರಿಯೂ ಅದು ಮುಂದುವರಿಯಲಿದೆ. ಜನ ಸರ್ಕಾರದ ವಿರುದ್ಧ ಇದ್ದಾರೆ. ಚುನಾವಣೆ ಮತದಾನದ ಮೂಲಕ ಗ್ರಾಮೀಣ ಭಾಗದ ಜನ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಸರ್ಕಾರದ ವಿರುದ್ಧ ಮತ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಸಲೀಂ ಅಹಮದ್ ತಿಳಿಸಿದ್ದಾರೆ.