ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯ 18 ಕ್ಷೇತ್ರಗಳಲ್ಲಿ 12 ಸೀಟ್ ಗೆದ್ದೆ ಗೆಲ್ಲುತ್ತೇವೆ. ಅಲ್ಲದೇ, ರಾಜ್ಯದಲ್ಲಿ ಒಟ್ಟಾರೆ 130ರಿಂದ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರಾವಳಿ ಭಾಗದಿಂದ ಕಲ್ಯಾಣ ಕರ್ನಾಟಕದವರೆಗೆ ನಮಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಈ ಚುನಾವಣೆಯಲ್ಲಿ ನಾವು 130-140 ಸೀಟ್ ಗೆಲ್ಲುತ್ತೇವೆ. ಈ ಸಂಬಂಧ ನಾನು ಯಾವುದೇ ಸಮೀಕ್ಷೆ ಮಾಡಿಸುತ್ತಿಲ್ಲ. ನಮ್ಮದು ಪ್ರಚಾರದ ಕೆಲಸವಷ್ಟೇ. ಸರ್ವೆಯನ್ನು ಪಕ್ಷ ಮಾಡಿಸುತ್ತದೆ ಎಂದು ತಿಳಿಸಿದರು
ನೋ ಕಮೆಂಟ್ಸ್: ಡಿಕೆಶಿ ಆಡಿಯೋ ಸಂಬಂಧ ಮಾತನಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಕ್ಕೆ ಬಯಸುವುದಿಲ್ಲ. ನೋ ಕಮೆಂಟ್ಸ್. ಅದಕ್ಕೆ ಉತ್ತರ ಕೊಡಬೇಕಾಗಿದ್ದು ಅಧ್ಯಕ್ಷರು. ಅವರೇ ಉತ್ತರ ಕೊಡ್ತಾರೆ. ಅದನ್ನು ಬಿಟ್ಟು ಬೇರೇ ಏನಾದರೂ ಕೇಳಿ. ಹೊಡೆಯೋರು ಬಿಡೋರು ಜನರೇ ಹೊರತು ಬೇರೆ ಯಾರೂ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು
ಮಾನ್ಯತೆ ನೀಡುತ್ತೇವೆ: ಪಂಚಮಸಾಲಿ ಸಮುದಾಯ ಮಾತ್ರವಲ್ಲ. ಎಲ್ಲ ಸಮುದಾಯಗಳಿಗೂ ಮಾನ್ಯತೆ ನೀಡುತ್ತೇವೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಕ್ಕೂ ನ್ಯಾಯ ಕೊಡಿಸುವ ಕೆಲಸ ಆಗುತ್ತದೆ. ಸ್ಕ್ರೀನಿಂಗ್ ಕಮಿಟಿ ಹಾಗೂ ಚುನಾವಣಾ ಸಮಿತಿ ಚರ್ಚೆ ಬಳಿಕ ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಇನ್ನು ಸಿದ್ದರಾಮಯ್ಯ ಅವರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ಎಲ್ಲಿ ಸ್ಪರ್ಧೆ ಮಾಡಬೇಕು ಅವರೂ ಹಾಗೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯಗೆ ಸಲಹೆ ಕೊಡುವಷ್ಡು ದೊಡ್ಡವನು ನಾನಲ್ಲ . ಕೆಎನ್ ರಾಜಣ್ಣನೂ ಅಲ್ಲ. ಸಿದ್ದರಾಮಯ್ಯ ಕೋಲಾರದಿಂದ ನಿಂತರೂ ಗೆಲ್ಲುತ್ತಾರೆ. ಎಲ್ಲೆ ನಿಂತರೂ ಗೆಲ್ತಾರೆ. 2018 ರ ಚುನಾವಣೆಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಸಿದ್ದರಾಮಯ್ಯ ಆಡಳಿತ ಹೇಗೆ ಎನ್ನುವುದು ಜನರಿಗೆ ಈಗ ಅರ್ಥ ಆಗುತ್ತಿದೆ ಎಂದು ವಿವರಿಸಿದರು.
ರಾಯಚೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋಗೆ ಸೇರಿದ ಜನರನ್ನು ನೋಡಿ. ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ನಡೆಸಿದ ರೋಡ್ ಶೋ ನೋಡಿ. ಎರಡನ್ನೂ ಹೋಲಿಕೆ ಮಾಡಿ ನೋಡಿ, ಯಾವ ಕಾರ್ಯಕ್ರಮದಲ್ಲಿ ಹೆಚ್ಚು ಜನ ಸೇರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಸುಮಲತಾ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರ ಕುರಿತು ಡಿಕೆಶಿ, ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿರಬಹುದು. ಶೀಘ್ರದಲ್ಲೇ ಗೊತ್ತಾಗಲಿದೆ. ಕಾಂಗ್ರೆಸ್ ಸೇರಲು ಬಿಜೆಪಿಯವರು ಸಾಲಿನಲ್ಲಿ ನಿಂತಿದ್ದಾರೆ. ಬಿಜೆಪಿಯ ಶಾಸಕರೂ ಕಾಂಗ್ರೆಸ್ ಸೇರಲಿದ್ದಾರೆ. ಮುಳುಗುವ ಹಡಗಿಗೆ ಯಾರಾದರೂ ಹೋಗುತ್ತಾರಾ? ಈಗಾಗಲೇ ಬಹಳಷ್ಟು ಮಂದಿ ಕಾಂಗ್ರೆಸ್ ಸೇರಿಲ್ವಾ? ಇನ್ನೂ ಸೇರುವವರಿದ್ದಾರೆ ನೋಡ್ತಾ ಇರಿ ಎಂದರು.
ಸುಮಲತಾ ಈ ಹಿಂದೆಯೇ ಕಾಂಗ್ರೆಸ್ ಸೇರಲು ಬಯಸ್ಸಿದ್ದಾಗಿ ಇತ್ತೀಚೆಗೆ ತಿಳಿಸಿದ್ದರು. ಆದರೆ, ಇದಕ್ಕೆ ಡಿಕೆ ಶಿವಕುಮಾರ್ ಅವರು ಅಡ್ಡಿಯಾಗಿದ್ದರು ಎಂದಿದ್ದರು. ಇದೆಲ್ಲದರ ನಡುವೆ ಈಗ ಅವರ ಪಕ್ಷ ಸೇರ್ಪಡನೆ ಸಂಬಂಧ ಮತ್ತೊಮ್ಮೆ ಪಕ್ಷದಲ್ಲಿ ಮಾತುಕತೆ ನಡೆಸಲಾಗಿದೆ.
ಇದನ್ನೂ ಓದಿ: ಬಸವೇಶ್ವರ ಪುತ್ಥಳಿ ತೆರವು: ಫ್ಲೈಓವರ್ ನಿರ್ಮಾಣಕ್ಕೆ ರಾತ್ರೋರಾತ್ರಿ ಕಾರ್ಯಾಚರಣೆ