ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರನ್ನಾಗಿ ಹೈಕಮಾಂಡ್ ಯಾರನ್ನೇ ಆಯ್ಕೆ ಮಾಡಿದರೂ ನಾವು ಸ್ವಾಗತ ಮಾಡಲಿದ್ದೇವೆ. ನಮಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದಷ್ಟೇ ಮುಖ್ಯ. ಹಾಗಾಗಿ ನಾವು ಆ ಕಡೆ ಗಮನ ಕೊಡುತ್ತೇವೆ ಎಂದು ಮಾಜಿ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯದಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಸಂಬಂಧ ಅನೇಕರ ಹೆಸರು ಕೇಳಿಬರುತ್ತಿದೆ. ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿರುವುದನ್ನು ನಾನೂ ಕೂಡ ಮಾಧ್ಯಮದಲ್ಲಿ ನೋಡಿದೆ. ಶೋಭಾ ಕರಂದ್ಲಾಜೆ ಕೂಡ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾನು ಕೇಂದ್ರದಲ್ಲಿ ಮಂತ್ರಿ ಇದ್ದೇನೆ. ಸಂತೋಷದಿಂದ ಇದ್ದೇನೆ. ಜವಾಬ್ದಾರಿ ಕೊಟ್ಟಿದ್ದಾರೆ. ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ. ನಾವೆಲ್ಲಾ ಹೇಳೋದು ಇಷ್ಟೇ. ಕೇಂದ್ರದಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.
ಕೇಂದ್ರದ ನಾಯಕರು ಆದಷ್ಟು ಬೇಗ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿದ್ದಾರೆ. ಪಂಚ ರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ನಾವೂ ಕೂಡ ಒತ್ತಡ ಹಾಕಲ್ಲ. ಪಂಚ ರಾಜ್ಯ ಚುನಾವಣೆ ಗೆಲ್ಲುವುದಕ್ಕೆ ಮೊದಲ ಆದ್ಯತೆ. ಕೇಂದ್ರದ ನಾಯಕರು ಯಾರನ್ನಾದ್ರೂ ಅಧ್ಯಕ್ಷ, ವಿಪಕ್ಷ ನಾಯಕರನ್ನ ಮಾಡಲಿ. ನಾವೆಲ್ಲರೂ ಸ್ವಾಗತ ಮಾಡುತ್ತೇವೆ. ನಮಗೆ ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಅಂತ ಹೆಬ್ಬಯಕೆ ಅಷ್ಟೆ ಎಂದು ಎಂದು ಆರ್ ಅಶೋಕ್ ತಿಳಿಸಿದರು.
ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿಯಾಗಿದ್ದು. 28ಕ್ಕೆ 28 ಕ್ಷೇತ್ರ ಗೆಲ್ಲಲಿದ್ದೇವೆ. ಆ ಮೂಲಕ ಮೋದಿ ಅವರಿಗೆ ಮತ್ತಷ್ಟು ಶಕ್ತಿ ಬರಲಿದೆ. ಆ ನಿಟ್ಟಿನಲ್ಲಿ ನಾವು ಯೋಚನೆ ಮಾಡ್ತಿದ್ದೇವೆ. 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮಗುರಿ. ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಗೊಂದಲ ಅಥವಾ ಜಾತಿ ಅನ್ನೋದು ಇಲ್ಲ. ಹೈಕಮಾಂಡ್, ರಾಷ್ಟ್ರೀಯ ನಾಯಕರು ಈಗಾಗಲೇ ಸರ್ವೆ ಮಾಡಿಸಿದ್ದಾರೆ. ಅಭಿಪ್ರಾಯ ಕೂಡ ಸಂಗ್ರಹ ಮಾಡಿದ್ದು, ಆದಷ್ಟು ಬೇಗ ಘೋಷಣೆ ಕೂಡ ಮಾಡಲಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ ಸದಾನಂದಗೌಡರು ದೆಹಲಿಗೆ ಯಾಕೆ ಹೋಗಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.
ಜೆಡಿಎಸ್ ಈಗಾಗಲೇ ಎನ್‌ಡಿಎ ಜೊತೆ ಸೇರಿದೆ. ಅದನ್ನು ನಾವು ಕೂಡ ಸ್ವಾಗತ ಮಾಡಿದ್ದೇವೆ. ವಿಧಾನಸಭಾ ಚುನಾವಣೆ ಮುಗಿದಿದೆ. ಲೋಕಸಭಾ ಚುನಾವಣೆ ನಡೆಯಬೇಕಿದೆ. ಹಾಗಾಗಿ ಹೊಂದಾಣಿಕೆ ಆಗಿದೆ. ಈ ಹೊಂದಾಣಿಕೆ ನಾವು ಸ್ವಾಗತ ಮಾಡುತ್ತೇವೆ. ಆದರೆ, ಕೇರಳ ಜೆಡಿಎಸ್ ವಿರೋಧ ಮಾಡಿದೆ. ಅದು ಜೆಡಿಎಸ್‌ನ ಆಂತರಿಕ ವಿಚಾರ. ಕೇರಳ ಜೆಡಿಎಸ್ ಹೊಂದಾಣಿಕೆ ನಿರ್ಧಾರ ಅವರಿಗೆ ಬಿಟ್ಟ ವಿಚಾರ ಎಂದರು.
ಇದೇ 27ಕ್ಕೆ ಜೆಪಿ ನಡ್ಡಾ ಭೇಟಿ ಮಾಡಲು ದೇವೇಗೌಡರು ದೆಹಲಿಗೆ ತೆರಳುತ್ತಾರೆ. ಅವರು ಈಗ ಎನ್‌ಡಿಎ ಪಾರ್ಟ್‌ನರ್ ಆಗಿದ್ದಾರೆ. ಮೊದಲು ಆಗಿದ್ದರೆ ಯಾಕೆ ಹೋದರು ಅಂತಾ ನೋಡಬೇಕಿತ್ತು. ಆದರೆ ಈಗ ಯಾವಾಗ ಬೇಕಾದ್ರೂ ಭೇಟಿಯಾಗಬಹುದು. ಅವರು ನುರಿತ ರಾಜಕಾರಣಿ. ಯಾವಾಗ, ಹೇಗೆ ದಾಳ ಉರುಳಿಸಬೇಕು ಅಂತ ಅವರಿಗೆ ಗೊತ್ತಿದೆ. ಅವರು ವರಿಷ್ಠರ ಜೊತೆ ಹೊಂದಾಣಿಕೆ ಬಗ್ಗೆ ಮಾತನಾಡಲಿದ್ದಾರೆ. ಇದನ್ನ ನಾವು ಸ್ವಾಗತ ಮಾಡಲಿದ್ದೇವೆ ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ : ಶೀಘ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ನೇಮಕ ಆಗಲಿದೆ : ಬಿ ವೈ ವಿಜಯೇಂದ್ರ