ಬೆಂಗಳೂರು : ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಈ ಕುರಿತಂತೆ ನೌಕರರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಶೀಘ್ರವೇ ತಜ್ಞರ ಸಮಿತಿ ರಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಸ್‌ಗಳು ನಮ್ಮ ಟೂರಿಸಂ ಸಂಕೇತ. ಬೆಂಗಳೂರಿಗೆ ಕಳಶ ಪ್ರಾಯ. ಹಳ್ಳಿಗೆ ಹೋಗುವ ಕೆಎಸ್ಆರ್ಟಿಸಿ ಕೂಡ ಮುಖ್ಯ. ನಿರಂತರ ಸೇವೆ ನೀಡುವ ಈ ವೃತ್ತಿಗೆ ಉತ್ತಮ ಹೆಸರಿದೆ. ನಿಗಮಗಳೆಲ್ಲವೂ ದೇಶಕ್ಕೆ ಮಾಡೆಲ್ ಆಗಿವೆ ಎಂದರು.
ಎಕ್ಸ್‌ಪರ್ಟ್ ಕಮಿಟಿ ರಚನೆ : ಆದಾಯ ವಿಚಾರದಲ್ಲಿ ಸಾರಿಗೆ ಇಲಾಖೆ ಹಿಂದೆ ಉಳಿದಿದೆ. ಈ ಕುರಿತಂತೆ ಅನೇಕ ನೌಕರರು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಸಾರಿಗೆ ಸಂಸ್ಥೆಗೆ ಯಾವ ರೀತಿ ಆದಾಯ ತರಬೇಕು ಎಂಬುದರ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ. ಹಲವು ತಜ್ಞರ ಜೊತೆ ಚರ್ಚೆ ಆರಂಭಿಸಿದ್ದೇನೆ.
ಶೀಘ್ರದಲ್ಲೇ ಎಕ್ಸ್‌ಪರ್ಟ್ ಕಮಿಟಿ ರಚನೆ ಮಾಡುತ್ತೇನೆ. ಯಾವ ರೀತಿ ಲಾಭ ಮಾಡಬಹುದು. ಬಂಡವಾಳ ಹೂಡುವುದರಿಂದ ಹಿಡಿದು ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ನಾಲ್ಕೈದು ತಿಂಗಳಲ್ಲಿ ವರದಿ ತರಿಸಲಾಗುವುದು. ಕೆಎಸ್ಆರ್ಟಿಸಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದರು.
ಶ್ರೀರಾಮುಲು ಮೇಲೆ ಭರವಸೆ ಇದೆ : ಸವಾಲುಗಳಿದ್ದಾಗಲೇ ನಾಯಕನಾಗಲು ಸಾಧ್ಯ. ಶ್ರೀರಾಮುಲು ಹೋರಾಟದಿಂದ ಬಂದಿದ್ದಾರೆ. ಇದನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಇದೆ. ಇದೇ ವಿಶ್ವಾಸದ ಮೇಲೆ ಅವರ ಹೆಗಲಿಗೆ ಇಲಾಖೆಯ ಜವಾಬ್ದಾರಿ ಹೊರಿಸಲಾಗಿದೆ. ಸಂಸ್ಥೆ ಏಳಿಗೆಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ನಮ್ಮ ಕೆಎಸ್ಆರ್ಟಿಸಿ 60 ವರ್ಷ ಸಂಭ್ರಮ ಆಚರಿಸುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ 50 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಉದ್ಯೋಗಿಗಳ ಮಕ್ಕಳ ಕಲಿಕೆಗಾಗಿ ಇನ್ಫೋಸಿಸ್ ಕಂಪನಿಯೊಂದಿಗೆ ಡಿಜಿಟಲ್ ಲರ್ನಿಂಗ್ ಆ್ಯಪ್ ಒಡಂಬಡಿಕೆ ಮಾಡಿರುವುದು, ಕುಂದುಕೊರತೆ ಆಲಿಸೋ ವೆಬ್‌ಸೈಟ್ ಬಿಡುಗಡೆ ಮಾಡಿರುವುದು ಅತ್ಯಂತ ಅರ್ಥಪೂರ್ಣ ಎಂದರು.
ಎಲ್ಲಾ ಚಾಲಕರು ಒಂದು ರೀತಿಯಲ್ಲಿ ಬ್ರಹ್ಮರು. ನಮ್ಮ ಜೀವವನ್ನು ಅವರ ಕೈಯಲ್ಲಿ ಕೊಟ್ಟಿರುತ್ತೇವೆ. ನಮ್ಮನ್ನು ಸುರಕ್ಷಿತವಾಗಿ ನಮ್ಮ ಸ್ಥಳಗಳಿಗೆ ತಲುಪಿಸುತ್ತಾರೆ. ಸರ್ಕಾರ ಕಾಲ ಕಾಲಕ್ಕೆ ನಿಮ್ಮ ಬೆನ್ನಿಗೆ ನಿಂತಿದೆ. ಅದನ್ನು ನೌಕರರು ಮರೆಯಬಾರದು. ನಮ್ಮ ನಾಯಕರಾದ ಯಡಿಯೂರಪ್ಪನವರು 2,300 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು.
ಇದೇ ವೇಳೆ ನಾಲ್ಕು ಸಾರಿಗೆ ನಿಯಮಗಳಲ್ಲಿನ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಿದರು. ಸಮಾರಂಭದಲ್ಲಿ ಸಾರಿಗೆ ಸಚಿವ ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಬಿ ಸಿ ನಾಗೇಶ್, ಶಾಸಕ ರಿಜ್ವಾನ್ ಅರ್ಷದ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮತ್ತಿತರರು ಉಪಸ್ಥಿತರಿದ್ದರು.
ಓದಿ: ಪ್ರತ್ಯೇಕ ಧರ್ಮಕ್ಕೆ ಕೈ ಹಾಕಿ ಕಾಂಗ್ರೆಸ್ ಮೂತಿಯನ್ನೇ ಸುಟ್ಟುಕೊಂಡಿದೆ : ಸಚಿವ ಆರ್ ಅಶೋಕ್