ಬೆಂಗಳೂರು : ನೈಟ್, ವೀಕೆಂಡ್ ಕರ್ಫ್ಯೂ ಸಂಬಂಧ ಹಾಗೂ ಕೋವಿಡ್ ನಿರ್ವಹಣೆ ಕುರಿತು ನಾಳೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ಇದೆ. ಅಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸ ಗೈಡ್‌ಲೈನ್ಸ್ ಹಾಗೂ ಕಾಂಗ್ರೆಸ್, ಜೆಡಿಎಸ್ ನಾಯಕರು ನೀಡಿದ ಸಲಹೆ ಮತ್ತು ಕೋವಿಡ್ ನಿರ್ವಹಣೆ ಕುರಿತು ಶುಕ್ರವಾರದ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.
ನೈಟ್, ವೀಕೆಂಡ್ ಕರ್ಫ್ಯೂ ತೆಗೆಯುವಂತೆ ಕೆಲವು ಕಾಂಗ್ರೆಸ್ ನಾಯಕರು ಈ ಬಗ್ಗೆ ಸಲಹೆ ನೀಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಶಾಲೆ ಮುಚ್ಚುವಂತೆಯೂ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರ, ತಜ್ಞರು ನೀಡುವ ಸಲಹೆ, ನಾಯಕರು ನೀಡಿರುವ ಸಲಹೆಗಳ ಬಗ್ಗೆ ಚರ್ಚಿಸಲಾಗುವುದು. ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಜಾಹಿರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸಾರ್ವಜನಿಕರ ಸಹಾಯವಿಲ್ಲದೆ ಕೋವಿಡ್ ಕಡಿಮೆ ಮಾಡಲು ಸಾಧ್ಯವಿಲ್ಲ. ಅಮೆರಿಕದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಹೀಗಾಗಿ ಅಲ್ಲಿ ಕೋವಿಡ್ ಪ್ರಕರಣಗಳ ಹಾಗೂ ಸಾವುಗಳು ಕೂಡ ಹೆಚ್ಚಾಗಿವೆ. ಆದರೆ ರಾಜ್ಯದಲ್ಲಿ ಅಂತಹ ಯಾವುದೇ ಘಟನೆ ನಡೆಯಬಾರದು. ಬ್ಯುಸಿನೆಸ್ ಒಂದೇ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನಿಸಲ್ಲ. ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಗೊಂದಲ ಇಲ್ಲ :
ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಗೊಂದಲ ಇಲ್ಲ. ಕೆಲವರು ಸಲಹೆಗಳನ್ನು ನೀಡುತ್ತಿದ್ದಾರೆ. ತಜ್ಞರು, ಕೇಂದ್ರ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆ ನೀಡುವ ಗೈಡ್‌ಲೈನ್ಸ್ ಪಾಲಿಸುತ್ತೇವೆ. ಅದರ ಜೊತೆಗೆ ನಾಯಕರ ಸಲಹೆಗಳ ಬಗ್ಗೆ ಚರ್ಚಿಸುತ್ತೇವೆ. ತಜ್ಞರ ಸಲಹೆ ಬಿಟ್ಟು ನಾವು ಏನೂ ಮಾಡಿಲ್ಲ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.
ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ಯಾವುದೇ ಪಕ್ಷದವರಾದರೂ ಬಿಡದೆ ಕ್ರಮ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ನವರು ಪ್ರತಿಭಟನೆ ನಡೆಸುವುದಕ್ಕೆ ಸ್ವಾಗತಿಸುತ್ತೇನೆ. ಆದರೆ ಕೋವಿಡ್ ಹೆಚ್ಚಾಗಲು ಕಾಂಗ್ರೆಸ್ ಪಾದಯಾತ್ರೆಯೇ ಕಾರಣ ಎಂದು ಆರೋಪಿಸಿದರು.
ಇದನ್ನೂ ಓದಿ: ನಾಳೆ ಮಧ್ಯಾಹ್ನ 1 ಗಂಟೆಗೆ ಕೋವಿಡ್ ಸಭೆ ಫಿಕ್ಸ್: ವೀಕೆಂಡ್ ಕರ್ಫ್ಯೂ ಭವಿಷ್ಯ ನಿರ್ಧಾರ?