ಬೆಂಗಳೂರು : ಕರ್ನಾಟಕ ಬಂದ್ ಮಾಡುವ ಸಂದರ್ಭ ಬಂದರೆ, ಅದನ್ನು ಮಾಡಲು ಹಿಂದೆ ಬೀಳುವುದಿಲ್ಲ. ಸರ್ಕಾರದ ನಿಲುವನ್ನು ನೋಡಿಕೊಂಡು ಮುಂದೆ ತೀರ್ಮಾನ ಮಾಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾವೇರಿ ಬಗ್ಗೆ ಹೋರಾಟ ಅಂದ್ರೆ ಮಂಡ್ಯ, ಮೈಸೂರು, ಚಾಮರಾಜನಗರ, ಕನ್ನಡಪರ ಹೋರಾಟಗಾರರು, ರೈತರು ಇದು ಇಷ್ಟಕ್ಕೆ ಸೀಮಿತವಲ್ಲ. ಇದು ಇಡೀ ರಾಜ್ಯದ ಪ್ರಶ್ನೆ, ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳ ಪ್ರಶ್ನೆ, ಉತ್ತರ ಕರ್ನಾಟಕದ ಪ್ರಶ್ನೆ, ಮಂಗಳೂರಿನ ಪ್ರಶ್ನೆ, ಬೆಂಗಳೂರಿನವರು ಬಹಳ ಮಂದಗತಿಯಲ್ಲಿದ್ದಾರೆ. ಇದರಲ್ಲಿ ಕನ್ನಡಿಗರು ಕಡಿಮೆ, ಮಾರವಾಡಿಗಳು, ಸಿಂಧಿಗಳು, ಇವರಾರಿಗೂ ಕನ್ನಡಿಗರ ನೋವು ನಲಿವು ಅರ್ಥ ಆಗ್ತಿಲ್ಲ. ಒಂದು ದಿನ ಕೊಳವೆಯಲ್ಲಿ ನೀರು ಬರದಿದ್ದರೆ, ಬೆಂಗಳೂರಿನವರಿಗೆ ಗೊತ್ತಾಗುತ್ತೆ ಎಂದು ಕಿಡಿಕಾರಿದರು.
ಬೆಂಗಳೂರಿನ ಜನಕ್ಕೆ ಕಾವೇರಿ ನೀರು ಬೇಕೋ, ಬೇಡವೋ?. ಪ್ರಮಾಣಪತ್ರ ಕೊಟ್ಟುಬಿಡಲಿ. ಹೋರಾಟ ಮಾಡುವವರು ಮಾಡಲಿ ಎಂದು ಸಮ್ಮನೆ ಇರುವುದು ಬೇಡ. ಎಲ್ಲ ಸಂಸದರು ಕೂಡಲೇ ರಾಜೀನಾಮೆ ನೀಡಬೇಕು. ನಿಮ್ಮ ಧೈರ್ಯ ತೋರಿಸಿ, ಸಿದ್ದರಾಮಯ್ಯನವರೇ ನಿಮ್ಮ ಬದ್ಧತೆ ತೋರಿ. ಹಿಂದೆ ಎಂದು ಕಾಣದಂತ ಹೋರಾಟ ಮಾಡ್ತೀವಿ ಎಂದು ವಾಟಾಳ್ ಎಚ್ಚರಿಕೆ ನೀಡಿದರು.
ಐಟಿ ಬಿಟಿಯವರು ಯಾರು ತಲೆಕೆಡಿಸಿಕೊಂಡಿಲ್ಲ. ನಾವು ಚಂದ್ರಲೋಕದಲ್ಲಿ ಇದ್ದೇವೆ ಎಂದು ತಿಳಿದಿದ್ದಾರೆ. ಗಗನಚುಂಬಿ ಕಟ್ಟಡದಲ್ಲಿರುವವರು ತಲೆಕೆಡಿಸಿಕೊಂಡಿಲ್ಲ. ಸ್ಟಾಲಿನ್ ಗೆ ಗೆಲುವಾಗಿದೆ, ಪ್ರಾಧಿಕಾರ ನೀಡಿದ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ನಮ್ಮ ವಾದ ಕೇಳಬೇಕಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರು ಕರ್ನಾಟಕದ ನಮ್ಮ ಕತ್ತು ತೆಗೆದಿದ್ದಾರೆ. ಅವರು ದೆಹಲಿಯಲ್ಲಿದ್ದಾರೆ. ಪ್ರಾಧಿಕಾರದವರು ಕರ್ನಾಟಕಕ್ಕೆ ಬಂದು ಕಾವೇರಿ ಭಾಗದ ಎಲ್ಲ ಜಲಾಶಯ ನೋಡಲಿ. ನ್ಯಾಯ ಕೇಳೋದಕ್ಕೆ ನಾವು ಎಲ್ಲಿ ಹೋಗಬೇಕು? ಎಂದು ಪ್ರಶ್ನಿಸಿದರು.
ಕರ್ನಾಟಕ ಒಂದು ಕಡೆ ಜಾರಿದ್ದಾರೆ. ಆರಂಭದಲ್ಲಿ ನೀರು ಬಿಡಬಾರದಿತ್ತು. ನಾವು ಜಾಣರು ಎಂದು ತೋರಿಸಿಕೊಳ್ಳಲು ನೀರು ಬಿಟ್ಟಿದ್ದಾರೆ. ಈಗ ಮುಂದಿನ ನಡೆ ಏನು?. ರಾಜ್ಯ ಸರ್ಕಾರ ಪುನರ್ ಪರಿಶೀಲನೆ ಅರ್ಜಿ ಹಾಕಬಹುದು. ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಅರ್ಜಿ ಹಾಕಬಹುದು. ಇಲ್ಲ ನೀರು ಬಿಡುವುದಿಲ್ಲ ಎಂದು ಬೀಗ ಹಾಕಬೇಕು. ಕಾವೇರಿ ನೀರು ಕುಡಿಯುವ ಋಣಕ್ಕಾದ್ರು, ಬೆಂಗಳೂರಿನವರು ಉಪವಾಸ ಮಾಡಿ, ಜಾಗರಣೆ ಮಾಡಿ. ತೆಲುಗು, ತಮಿಳರು, ಮಲಯಾಳಿಗಳು, ಗುಜರಾತಿಗಳು ಎಲ್ಲರೂ ಉಪವಾಸ, ಜಾಗರಣೆ ಮಾಡಿ ಇಲ್ಲದಿದ್ದರೆ ಊರು ಬಿಟ್ಟು ಹೋಗಿ ಎಂದು ತಿಳಿಸಿದರು.
ನೀವು ಈ ಬಗ್ಗೆ ಹೋರಾಟ ಮಾಡದಿದ್ದರೆ ಹೇಗೆ?. ಬೆಂಗಳೂರಿನ ಜನ ಮಾತನಾಡಬೇಕು. ಬೆಂಗಳೂರಿಗೆ ಬರುವ ನೀರನ್ನು ತಡೆದ್ರೆ ನಿಮಗೆ ಗೊತ್ತಾಗುತ್ತೆ. ನಾವಂತೂ ನೀರನ್ನು ಬಿಡಲು ಒಪ್ಪೊಲ್ಲ. ಎಲ್ಲ ಕನ್ನಡಪರ ಸಂಘಟನೆಗಳು ಇನ್ನೆರಡು ದಿನದಲ್ಲಿ ಸೇರಿ ಮುಂದೆ ದೊಡ್ಡ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಸ್ಟಾಲಿನ್ಗೆ ಹೇಳುತ್ತಿದ್ದೇನೆ, ಬೆಂಗಳೂರಿನಲ್ಲಿ ತಮಿಳಿನವರು ಎಷ್ಟು ಮಂದಿ ಇದ್ದಾರೆ?. ಯಾವ ಕಾಲದಿಂದ ಇದ್ದಾರೆ. ಅವರು ನೀರು ಕುಡಿಯಬೇಕೋ, ಬೇಡವೋ?. ನೀವೇ ಹೇಳಿ, ಕುಡಿಯುವುದು ಬೇಡ ಎಂದರೆ ಎಲ್ಲರನ್ನೂ ಕರೆಸಿಕೊಳ್ಳಿ. ತಮಿಳು ಸಿನಿಮಾ ನಿಲ್ಲಿಸುತ್ತೇವೆ, ರಜನಿಕಾಂತ್ ಇಲ್ಲಿಗೆ ಬರಲು ಬಿಡುವುದಿಲ್ಲ. ನಿಮ್ಮ ವಿರುದ್ಧ ಮಾತಾಡ್ತಿಲ್ಲ. ಬಹಳ ನೋವಿನಿಂದ ಹೇಳ್ತಿದ್ದೇನೆ. ನಮ್ಮನ್ನು ಯಾರು ಕೇಳದ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಮೇಕೆದಾಟು, ಉತ್ತರ ಕರ್ನಾಟಕದ ವಿಚಾರ, ದೇವೇಗೌಡರು ನೀರು ಬಿಟ್ಟಾಗ ಬಂದ್ ಮಾಡಿದ್ದೇವೆ. ನಮ್ಮವರೆಲ್ಲ ಇವತ್ತು ಮಾತಾಡಿ ಹೇಳಿದ್ದಾರೆ. ಬರುತ್ತೇವೆ ಎಂದು ಹೇಳಿದ್ದಾರೆ. ನೋಡೋಣ. ನಮ್ಮ ಕನ್ನಡ ನಟರೆಲ್ಲ ಎಲ್ಲೆಲ್ಲೋ ಇದ್ದಾರೆ. ಅವರೆಲ್ಲ ಹೋರಾಟಕ್ಕೆ ಬರಬೇಕು ಎಂದು ವಾಟಾಳ್ ಒತ್ತಾಯಿಸಿದರು.
ಇದನ್ನೂ ಓದಿ: ತಮಿಳುನಾಡಿಗೆ ಹರಿದ ಕಾವೇರಿ; ರಾಜ್ಯ ಸರ್ಕಾರದ ವಿರುದ್ಧ ಖಾಲಿ ಕೊಡಗಳೊಂದಿಗೆ ವಾಟಾಳ್ ಪ್ರತಿಭಟನೆ